ಹಳೇಬೀಡು

Halebidu

ಕರ್ನಾಟಕದಲ್ಲಿ ಶಿಲ್ಪಕಲೆಗೆ ಹೆಸರಾಗಿರುವ, ಐತಿಹಾಸಿಕ ಸ್ಥಳ ಹಳೆಬೀಡು ಹಾಸನ ಜಿಲ್ಲೆಯಲ್ಲಿದೆ.

ಹಳೇಬೀಡು ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳ ದೊರೆಗಳ ರಾಜಧಾನಿಯಾಗಿದ್ದು ದೋರಸಮುದ್ರ ಎಂಬ ಹೆಸರನ್ನು ಪಡೆದಿತ್ತು ಮತ್ತು ಧನಧಾನ್ಯದಿಂದ ತುಂಬಿ ಸಮೃದ್ಧವಾಗಿತ್ತು. ಮಹಮದೀಯ ದಂಡನಾಯಕನಾಗಿದ್ದ ಮಲ್ಲಿಕಾಫರನು ದಾಳಿ ಮಾಡಿ ಅಲ್ಲಿದ್ದ ಐಶ್ವರ್ಯವನ್ನೆಲ್ಲಾ ದೊಚಿಕೊಂಡು ಹೋದನು. ಇದು ಮತ್ತೆ ಮತ್ತೆ ಮಹಮದೀಯರ ದಾಳಿಗೆ ಬಲಿಯಾಗಿ ಹಳೇಬೀಡು ಎಂಬ ಹೆಸರಾಯಿತು.

ಒಂಬತ್ತನೆಯ ಶತಮಾನದಲ್ಲಿ ರಾಷ್ಟೃಕೂಟರ ದೊರೆ ಧ್ರುವ ನಿರುಪಮನೆಂಬುವನು ದೊಡ್ಡ ಕೆರೆಯೊಂದನು ನಿರ್ಮಿಸಿ ಅದಕ್ಕೆ ಧ್ರುವಸಮುದ್ರವೆಂದು ಹೆಸರಿಟ್ಟನು. ಅದೇ ಕ್ರಮೇಣ ದೊರಸಮುದ್ರ ಎಂದು ಕರೆಯಲ್ಪಟ್ಟಿತು.

Halebidu
Halebidu

ಇಲ್ಲಿರುವ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ಎಂಬ ಜೋಡಿ ದೇವಾಲಯಗಳನ್ನು ಹನ್ನೆರಡನೆಯ ಶತಮಾನದಲ್ಲಿ ವಿಷ್ಣುವರ್ಧನ ದಂಡನಾಯಕನಾದ ಕೇತುಮಲ್ಲನು ಕಟ್ಟಿಸಿದನು.

ಇಲ್ಲಿನ ಪ್ರತಿಯೊಂದು ಗರ್ಭಗುಡಿಯ ಮುಂಬಾಗದಲ್ಲಿಯೂ ನಂದಿಯ ಶಿಲಾವಿಗ್ರಹಗಳಿರುವ ಮಂಟಪಗಳಿವೆ. ದೇವಸ್ಥಾನಗಳ ದ್ವಾರಗಳಲ್ಲಿ ದ್ವಾರಪಾಲಕರ ವಿಗ್ರಹಗಳಿವೆ.

ದೇವಾಲಯದ ಹೊರಗೋಡೆಯ ಮೇಲೆ ಆನೆಗಳ ಸಾಲನ್ನು ಕೆತ್ತಲಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆನೆಗಳನ್ನು ವಿವಿಧ ಭಂಗಿಗಳು ಬಿಡಿಸಿದ್ದಾರೆ. ಇದರ ಮೇಲಿನ ಸಾಲಿನಲ್ಲಿ ಸಿಂಹಗಳ ಸಾಲನ್ನು ಕೆತ್ತಿ ಅದರ ಮೇಲಿನ ಪಂಕ್ತಿಯಲ್ಲಿ ವಿವಿಧ ವಿನ್ಯಾಸದಲ್ಲಿ ಲತೆಗಳನ್ನು ಬಿಡಿಸಲಾಗಿದೆ. ನಾಲ್ಕನೆಯ ಸಾಲಿನಲ್ಲಿ ಕುದುರೆಯ ಸಾಲು ಮತ್ತು ಕುದುರೆ ಸವಾರರು ಇದ್ದಾರೆ. ಐದನೆಯ ಸಾಲಿನಲ್ಲಿ ಮನುಷ್ಯರ, ಪ್ರಾಣಿಗಳ, ಹೂವು ಮತ್ತು ಕಾಯಿಗಳ ಚಿತ್ರಗಳಿವೆ. ಆರನೆಯ ಸಾಲಿನಲ್ಲಿ ಜನಜೀವನವನ್ನು ಪ್ರತಿಬಿಂಭಿಸುವ ವಿವಿಧ ಉಡುಗೆ ತೊಡುಗೆಗಳ ಚಿತ್ರಗಳಿವೆ. ಏಳನೆಯ ಸಾಲಿನಲ್ಲಿ ಮೊಸಳೆಗಳನ್ನು ಬಿಡಿಸಲಾಗಿದೆ. ಎಂಟನೆಯ ಸಾಲಿನಲ್ಲಿ ರಾಮಾಯಣ ಮೊದಲಾದ ಪುರಾಣ ಕಥೆಗಳನ್ನು ಹೇಳುವ ಚಿತ್ರಗಳಿವೆ. ಒಂಬತ್ತನೆಯ ಸಾಲಿನಲ್ಲಿ ವಿವಿಧ ಭಂಗಿಯ ಜನಜೀವನದ ದೃಶ್ಯಗಳಿವೆ.

ಈ ದೇವಾಲಯವನ್ನು ಕಟ್ಟಿಸಲು ಕಾರಣನಾದ ಕೇತುಮಲ್ಲನ ಆಸ್ಥಾನದ ಚಿತ್ರವೊಂದನ್ನು ಇಲ್ಲಿ ಕಡೆದಿರಿಸಲಾಗಿದೆ. ಸಮುದ್ರಮಥನದ ಚಿತ್ರ, ಶುಕ್ರ, ಕಚ, ದೇವಯಾನಿಯರ ಕಥೆಯನ್ನು ಹೇಳುವ ಚಿತ್ರ, ಉಮಾ ಮಹೇಶ್ವರರ ಆಸ್ಥಾನ, ವಾಮನಾವತಾರ - ಹೀಗೆ ಅನೇಕ ಪುರಾಣದ ಕಥೆಗಳನ್ನು ನಿರೂಪಿಸುವ ಚಿತ್ರಗಳಿವೆ. ಮಹಾಭಾರತದ ಸಂರ್ಪೂಣ ಕಥೆಯನ್ನು ಸಾರುವ ಚಿತ್ರಗಳು ಹೃದಯಂಗಮವಾಗಿದೆ.

ಇಲ್ಲಿಯೇ ಪಕ್ಕದಲ್ಲಿರುವ ಬಸ್ತಿಹಳ್ಳಿಯಲ್ಲಿ ಪಾರ್ಶ್ವನಾಥ ಬಸ್ತಿ, ಆದಿನಾಥ ಬಸ್ತಿ ಮತ್ತು ಶಾಂತಿನಾಥ ಬಸ್ತಿ ಎಂಬ ಮೂದು ಜೈನ ದೇವಾಲಯಗಳಿವೆ. ಪಾರ್ಶ್ವನಾಥ ಬಸ್ತಿಯಲ್ಲಿ ಹನ್ನೆರಶು ಕರಿಶಿಲೆಯ ಹೊಳಪಾದ ಕಂಬಗಳಿವೆ. ಇವು ಕನ್ನಡಿಯಂತೆ ಹೊಳಪಾಗಿವೆ. ಇವುಗಳಲ್ಲಿ ನಮ್ಮ ಪ್ರತಿಬಿಂಬವನ್ನು ಸ್ಪಷ್ಟವಾಗಿ ನೋಡಬಹುದು. ಸುಂದರವಾದ ಕೆತ್ತನೆಯ ಕೆಲಸಗಳೂ ಇಲ್ಲಿವೆ.

Halebidu
Halebidu

ತತ್ಸಮಾನ ಜ್ಞಾನ ಪುಟಗಳು

}