ಬೇಲೂರು
ನಮ್ಮ ನಾಡಿನ ಜ್ಞಾನಭಂಡಾರ, ಲಲಿತ ಕಲೆಗಳ ತೌರೂರು, ಸಂಸ್ಕೃತಿಯ ನೆಲೆವೀಡಾದ ಬೇಲೂರು ಹಾಸನದಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಈ ಊರಿಗೆ ವೇಲಾಪುರ, ವೇಲೂರು, ಬೇಲೂರು ಮುಂತಾದ ಹೆಸರುಗಳಿವೆ. ಇದು ಹೊಯ್ಸಳರ ರಾಜಧಾನಿಗಳಲ್ಲೊಂದಾಗಿತ್ತು. ಇಲ್ಲಿಯ ಚನ್ನಕೇಶವ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನು ಹನ್ನೆರಡನೆಯ ಶತಮಾನದಲ್ಲಿ ಚೋಳರ ವಿರುದ್ಧದ ಗೆಲುವಿನ ನೆನೆಪಿಗಾಗಿ ಕ್ರಿ.ಶ. 1116ರಲ್ಲಿ ಕಟ್ಟಿಸಿದನು.
ದೇವಸ್ಥಾನದ ಗೋಪುರವು ಐದು ಅಂತಸ್ತುಗಳಿಂದ ಕೂಡಿದೆ. ಮಹಾದ್ವಾರವಾದ ಆನೆಯ ಬಾಗಿಲಿನಿಂದ ಪ್ರವೇಶಿಸಿದರೆ ಎಡಪಕ್ಕದಲ್ಲಿ ಕಪ್ಪೆ ಚನ್ನಿಗರಾಯನ ದೇವಸ್ಥಾನವಿದೆ. ಇದನ್ನು ವಿಷ್ಣುವರ್ಧನನ ಹಿರಿಯ ರಾಣಿ ಶಾಂತಲೆ ಕಟ್ಟಿಸಿದಳು.
ಚನ್ನಕೇಶವ ದೇವಾಲಯವನ್ನು ದಾಸೋಜ, ಚಾವಣ, ಪಾದರಿ, ಕೇಶವದೇವ ಮುಂತಾದವರು ನಿರ್ಮಿಸಿದರು. ಜಕಣಾಚಾರಿಯೂ ಇದರಲ್ಲಿ ಪಾಲ್ಗೊಂಡಿದ್ದನೆಂಬ ದಂತಕಥೆ ಇದೆ. ದೇವಸ್ಥಾನದ ಎಡಗಡೆಯಲ್ಲಿರುವ ಒಂದು ಕಂಬವನ್ನು ಯಾವ ಜೋಡಣೆಯೂ ಇಲ್ಲದೆ ಪೀಠದ ಮೇಲೆ ಹಾಗೆಯೇ ನಿಲ್ಲಿಸಲಾಗಿದೆ.
ದೇವಸ್ಥಾನದ ಕೆಳಗಿನ ಭಾಗದಲ್ಲಿ ಆನೆಯ ಸಾಲನ್ನು ಮೇಲಿನ ಭಾಗದಲ್ಲಿ ಸಿಂಹದ ಸಾಲು ಇದೆ. ಪೂರ್ವದ್ವಾರದ ಬಲಗಡೆಯಲ್ಲಿ ಮಹಾಭಾರತದ ಕಥೆಯನ್ನು ಚಿತ್ರರೂಪದಲ್ಲಿ ಕೆತ್ತಲಾಗಿದೆ. ಪಾಂಡವರು ಕೌರವರು ಆಡಿದ ಮರಕೋತಿಯಾಟ, ಪಗಡೆಯಾಟ, ವಿರಾಟರಾಜನ ದರ್ಬಾರು, ಕುರುಕ್ಷೇತ್ರ ಯುದ್ಧದಲ್ಲಿ ಭೀಮ ಭಗದತ್ತನೊಡನೆ ಸೆಣೆಸಿದ ಚಿತ್ರ, ಹೀಗೆ ಇಡೀ ಮಹಾಭಾರತದ ಕಥೆಯನ್ನೆಲ್ಲಾ ಸುಂದರವಾಗಿ ಬಿಡಿಸಿದ್ದಾರೆ ಚತುರ ಶಿಲ್ಪಿಗಳು. ಮಹಾಭಾರತದ ಕಥೆಯನ್ನಲ್ಲದೆ ರಾಮಾಯಣದ ಕಥೆಯನ್ನೂ ಹೇಳುವ ಶಿಲ್ಪ ಇಲ್ಲಿದೆ.
ಮೂರನೆಯ ಸಾಲಿನಲ್ಲಿ ವಿಷ್ಣುವರ್ಧನನ ದರ್ಬಾರಿನ ಚಿತ್ರವನ್ನು ಕೆತ್ತಲಾಗಿದೆ. ಅಲ್ಲಿಂದ ಮಂದಕ್ಕೆ ಹೋದರೆ ವಾಮನನು ಬಲಿಯನ್ನು ಪಾತಾಳಕ್ಕೆ ತುಳಿದ ಚಿತ್ರ ತುಂಬ ಸುಂದರವಾಗಿದೆ. ಇದರ ಮುಂದಿನದು ಶ್ರೀಕೃಷ್ಣನ ಬಾಲಲೀಲೆಯನ್ನು ಪರಿಚಯಿಸುವ ಚಿತ್ರ, ಕಾಳಿಂಗಮರ್ದನದ ಚಿತ್ರ ತುಂಬ ಮನೋಹರವಾಗಿದೆ. ಹಾಗೆಯೇ ಸ್ವಲ್ಪ ಮುಂದೆ ಸಾಗಿದರೆ ಅತ್ಯುಗ್ರ ರೂಪಿಯಾದ ನರಸಿಂಹನು ಹಿರಣ್ಯಕಶ್ಯಪುವನ್ನು ಕೊಂದು ಪ್ರಹ್ಲಾದನನ್ನು ರಕ್ಷಿಸಿದ ಕಥೆಯನ್ನು ಹೇಳುವ ಚಿತ್ರವಿದೆ.
ಸಾವಿನ ವಿಚಿತ್ರ ಲೀಲೆಯನ್ನು ತೋರಿಸುವ ಸುಂದರವಾದ ಚಿತ್ರವೊಂದನ್ನು ಇಲ್ಲಿ ಕೆತ್ತಲಾಗಿದೆ. ಗಂಡಭೇರುಂಡವು ಶರಭವನ್ನು, ಶರಭವು ಸಿಂಹವನ್ನೂ, ಸಿಂಹವು ಆನೆಯನ್ನೂ, ಆನೆಯು ಸರ್ಪವನ್ನೂ, ಸರ್ಪವು ಇಲಿಯನ್ನೂ ಕೊಲ್ಲಲು ಹವಣಿಸುತ್ತಿದೆ. ಸಾವಿನ ಈ ನಾಟಕವನ್ನು ಸನ್ಯಾಸಿಯೊಬ್ಬನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದಾನೆ. ಸಾವು ನಮ್ಮ ಬೆನ್ನ ಹಿಂದೆಯೇ ಇದೆ ಎಂಬ ಎಚ್ಚರಿಕೆಯನ್ನು ಇದು ನಮಗೆ ನೀಡುವಂತಿದೆ.
ತುಂಬಾ ಸುಂದರವಾದ ಶಿಲಾಕೃತಿಗಳೆಂದರೆ ನಾಲ್ಕನೆಯ ಸಾಲಿನಲ್ಲಿರುವ ಶಿಲಾಬಾಲಿಕೆಯರವು. ಇವುಗಳನ್ನು ಮದನಿಕೆಗಳು ಅಥವಾ ಮದನಕೈ ವಿಗ್ರಹಗಳು ಅಥವಾ ಸಾಲಭಂಜಿಕೆಗಳೆಂದು ಕರೆಯುತ್ತಾರೆ. ಇಂತಹ ಮದನಿಕೆಗಳು ದೇವಸ್ಥಾನದ ಹೊರಗೋಡೆಯಲ್ಲಿ ನಲವತ್ತು, ಒಳಭಾಗದಲ್ಲಿ ನಾಲ್ಕು ಇವೆ. ಒಂದೊಂದು ಮದನಿಕೆಗೂ ಸುರಸುಂದರಿ, ಶುಕಸುಂದರಿ, ವಸಂತಸುಂದರಿ, ಶುಕವಾಣಿ ಮುಂತಾದ ಹೆಸರುಗಳನ್ನು ಕೊಡಲಾಗಿದೆ.
ದೇವಸ್ಥಾನದ ಒಳಭಾಗದಲ್ಲಿರುವ ನಲವತ್ತೆರಡು ಕಂಬಗಳ ಮೇಲೆ ವಿವಿಧ ಶಿಲ್ಪಗಳನ್ನು ಕೆತ್ತಲಾಗಿದೆ. ಒಂದು ಕಂಬದಂತೆ ಮತ್ತೊಂದಿಲ್ಲ. ಒಂದೊಂದರಲ್ಲಿಯೂ ವಿಶೇಷವಿದೆ. ಅತ್ಯಂತ ಸುಂದರವಾದ ಮೇಲ್ಛಾವಣಿ ಇದೆ. ಇದನ್ನು ಭುವನೇಶ್ವರಿ ಎಂದು ಕರೆಯುತ್ತಾರೆ. ಇದರ ಒಳಗಡೆ ದೇವರ ಅವತಾರಗಳು, ಭಾಗವತ, ಮಹಾಭಾರತದ ದೃಶ್ಯಗಳು, ನೃತ್ಯ, ಮಲ್ಲಯುದ್ಧ. ಕೋಲಾಟ, ಇತ್ಯಾದಿ ಚಿತ್ರಗಳನ್ನು ಬಿಡಿಸಲಾಗಿದೆ. ವಿಷ್ಣುವರ್ಧನನ ಕಾಲದ ಜನರ ನಡೆನುಡಿ, ಆಚಾರ ವ್ಯವಹಾರ, ಉಡಿಗೆ ತೊಡುಗೆಗಳು, ದಿನ ನಿತ್ಯದ ಜೀವನ, ಕಷ್ಟ ಸುಖ ಇವೇ ಮೊದಲಾದ ವಿಷಯಗಳ ಪರಿಚಯವು ನಮಗೆ ಈ ದೇವಸ್ಥಾನದ ವಾಸ್ತು ಶಿಲ್ಪದಿಂದಾಗುತ್ತದೆ.