ಕನ್ನಡ ವ್ಯಾಕರಣದಲ್ಲಿ "ಅವ್ಯಯಗಳು" ಒಂದು ಪ್ರಮುಖ ಭಾಗವಾಗಿದೆ. ಭಾಷೆಯಲ್ಲಿ ಪದಗಳು ತಮ್ಮ ಲಿಂಗ, ವಚನ, ಮತ್ತು ವಿಭಕ್ತಿಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುತ್ತವೆ. ಆದರೆ, ಕೆಲವು ಪದಗಳು ಯಾವುದೇ ಬದಲಾವಣೆಯಿಲ್ಲದೆ ವಾಕ್ಯದಲ್ಲಿ ಒಂದೇ ರೂಪದಲ್ಲಿ ಬಳಕೆಯಾಗುತ್ತವೆ. ಇಂತಹ ಪದಗಳೇ 'ಅವ್ಯಯಗಳು'. ಇವುಗಳನ್ನು 'ಅವಿಕಾರಿ ಪದಗಳು' ಎಂದೂ ಕರೆಯುತ್ತಾರೆ.

ಅವ್ಯಯ ಎಂದರೇನು?
ಅವ್ಯಯ ಎಂದರೆ "ವ್ಯಯವಾಗದಿರುವುದು" ಅಥವಾ "ಬದಲಾಗದಿರುವುದು". ಕನ್ನಡ ವ್ಯಾಕರಣದಲ್ಲಿ, ಲಿಂಗ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ), ವಚನ (ಏಕವಚನ, ಬಹುವಚನ) ಮತ್ತು ವಿಭಕ್ತಿ ಪ್ರತ್ಯಯಗಳಿಂದ (ಉದಾ: -ಅನ್ನು, -ಇಂದ) ಯಾವುದೇ ಬದಲಾವಣೆ ಹೊಂದದೆ, ತಮ್ಮ ಮೂಲ ರೂಪದಲ್ಲೇ ಬಳಕೆಯಾಗುವ ಪದಗಳನ್ನು ಅವ್ಯಯಗಳು ಎಂದು ಕರೆಯಲಾಗುತ್ತದೆ. ಇವು ವಾಕ್ಯದ ಅರ್ಥವನ್ನು ಸ್ಪಷ್ಟಪಡಿಸಲು ಅಥವಾ ಪೂರ್ಣಗೊಳಿಸಲು ಸಹಾಯ ಮಾಡುತ್ತವೆ.
ಉದಾಹರಣೆಗೆ: 'ಮತ್ತು', 'ಆದರೆ', 'ಹಾಗೆ', 'ಬಳಿಕ', 'ಸುಮ್ಮನೆ', 'ಅಯ್ಯೋ', 'ಭಲೆ'.
ಅವ್ಯಯಗಳ ವಿಧಗಳು
ಅವ್ಯಯಗಳಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಧಗಳನ್ನು ಗುರುತಿಸಬಹುದು:
1. ಸಾಮಾನ್ಯಾವ್ಯಯ (ಸಾಮಾನ್ಯ ಅವ್ಯಯ)
ಯಾವುದೇ ಕ್ರಿಯೆ ನಡೆದ ಸ್ಥಳ, ಕಾಲ, ಅಥವಾ ರೀತಿಯನ್ನು ಸೂಚಿಸುವ ಪದಗಳನ್ನು ಸಾಮಾನ್ಯಾವ್ಯಯ ಎನ್ನುತ್ತಾರೆ. ಇವು ಕ್ರಿಯಾಪದದ ವಿಶೇಷಣಗಳಂತೆ ಕಾರ್ಯನಿರ್ವಹಿಸುತ್ತವೆ.
- ಸ್ಥಳ ಸೂಚಕ: ಅಲ್ಲಿ, ಇಲ್ಲಿ, ಎಲ್ಲಿ, ಮೇಲು, ಕೆಳಗು, ಮುಂದೆ, ಹಿಂದೆ.
- ಉದಾ: ಅವನು ಅಲ್ಲಿ ಕುಳಿತಿದ್ದಾನೆ.
- ಅಲ್ಲಿ ಯಾವಾಗಲೂ ಗಲಭೆ ಉಂಟಾಗುತ್ತದೆ.
- ಕಾಲ ಸೂಚಕ: ಆಗ, ಈಗ, ನಿನ್ನೆ, ಇಂದು, ಅಂದು, ಎಂದು, ಬಳಿಕ, ಬೇಗ, ತರುವಾಯ, ಕೂಡಲೇ, ಒಡನೆ, ಯಾವಾಗ, ಆಮೇಲೆ, ಆವಾಗ
- ಉದಾ: ನಾವು ಈಗಲೇ ಹೊರಡಬೇಕು.
- ಇಂದು ನಮ್ಮ ಮನೆಯಲ್ಲಿ ಹಬ್ಬವಿದೆ.
- ರೀತಿ ಸೂಚಕ: ಚೆನ್ನಾಗಿ, ನೆಟ್ಟಗೆ, ತಟ್ಟನೆ, ಸುಮ್ಮನೆ, ಮೆಲ್ಲನೆ, ಹಾಗೆ, ಹೀಗೆ, ನುಣ್ಣಗೆ, ತಣ್ಣಗೆ, ತೆಳ್ಳಗೆ, ಬೆಳ್ಳಗೆ, ಅಂತು, ಇಂತು, ಎಂತು, ಅಂತೆ, ಬೇಗನೆ, ಬೆಚ್ಚನೆ
- ಉದಾ: ಅವಳು ಚೆನ್ನಾಗಿ ಹಾಡುತ್ತಾಳೆ.
2. ಅನುಕರಣಾವ್ಯಯ (ಅನುಕರಣಾ ಅವ್ಯಯ)
ಯಾವುದೇ ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಅಥವಾ ಒಂದು ಕ್ರಿಯೆಯ ಶಬ್ದವನ್ನು ತಾನು ಕೇಳಿದಂತೆಯೇ ಪುನಃ ಅನುಕರಿಸಿ ಹೇಳುವ ಪದಗಳಿಗೆ ಅನುಕರಣಾವ್ಯಯ ಎನ್ನುತ್ತಾರೆ.
ಮೇಲ್ನೋಟಕ್ಕೆ ದ್ವಿರುಕ್ತಿ ಮತ್ತು ಅನುಕರಣಾವ್ಯಯ ಒಂದೇ ಬಗೆಯಾಗಿ ಕಂಡರೂ, ಇವೆರಡು ಬೇರೆಬೇರೆ. ಅರ್ಥವಿರುವಂಥಹ ಒಂದು ಪದವನ್ನು ಎರೆಡೆರಡು ಬಾರಿ ಬಳಸಿದರೆ ಅದು ದ್ವಿರುಕ್ತಿ. ಅರ್ಥವಿಲ್ಲದ ಒಂದು ಪದವನ್ನು ಎರೆಡೆರಡು ಬಾರಿ ಬಳಸಿದರೆ ಅದು ಅನುಕರಣಾವ್ಯಯ.
ಉದಾ: ಪಟಪಟ, ಸರಸರ, ಜುಳುಜುಳು, ಧಗಧಗ, ಗುಡುಗುಡು, ದಬದಬ, ಚಟಚಟ, ಮಿಣಿಮಿಣಿ, ರೊಯ್ಯನೆ, ಸುಯ್ಯನೆ, ಭೋರನೆ, ಚುರುಚುರು, ತಟತಟ, ದಡದಡ, ಕಟಕಟ, ಗಿರಗಿರನೆ, ರಪರಪ, ಗಳಗಳನೆ, ಛಂಗನೆ, ಭಗ್ಗನೆ
- ಮಳೆ ಸರಸರ ಎಂದು ಸುರಿಯಿತು.
- ಬೆಂಕಿ ಧಗಧಗನೆ ಉರಿಯಿತು.
- ಮಳೆಯು ಪಟಪಟನೆ ಬೀಳುತ್ತಿತ್ತು.
3. ಸಂಬೋಧಕಾವ್ಯಯ
ಯಾರನ್ನಾದರೂ ಉದ್ದೇಶಿಸಿ ಕರೆಯುವಾಗ(ಸಂಬೋಧನೆ) ಬಳಸುವ ಅವ್ಯಯ ಪದಗಳನ್ನು ಸಂಬೋಧಕಾವ್ಯಯಗಳಉ ಎಂದು ಕರ್ಯುತ್ತಾರೆ.
ಉದಾ: ಎಲೌ, ಎಲೈ, ಒ, ಓಯ್, ಏಯ್
- ಎಲೌ ಮೂರ್ಖ.
- ಎಲೇ ಮಂಕೆ.
- ಓಯ್ ಬಾರೋ ಇಲ್ಲಿ.
- ಏಯ್ ಎಷ್ಟು ಮಾತನಾಡ್ತೀಯ.
4. ಭಾವಸೂಚಕಾವ್ಯಯ (ಭಾವಸೂಚಕ ಅವ್ಯಯ)
ಮನಸ್ಸಿನಲ್ಲಿ ಉಂಟಾಗುವ ಆಶ್ಚರ್ಯ, ಸಂತೋಷ, ದುಃಖ, ಭಯ, ಮೆಚ್ಚುಗೆ, ಕೋಪ, ತಿರಸ್ಕಾರ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಪದಗಳನ್ನು ಭಾವಸೂಚಕಾವ್ಯಯ ಎನ್ನುತ್ತಾರೆ. ಇವುಗಳಿಗೆ 'ನಿಪಾತಾವ್ಯಯ' ಎಂದೂ ಹೆಸರು.
ಉದಾ: ಅಯ್ಯೋ!, ಆಹಾ!, ಅಬ್ಬಾ!, ಛೇ!, ಭಲೇ!, ಶಬ್ಭಾಷ್!, ಓಹೋ!, ಎಲಾ!, ಹೋ!, ಭಳಿರೆ!, ಢುಂ!, ಅಕಟ!, ಅಹಹ!, ಅಕಟಕಟಾ!, ಛೀ!
- ಅಯ್ಯೋ! ಪಾಪ, ಅವನು ಎಷ್ಟೊಂದು ಕಷ್ಟದಲ್ಲಿದ್ದಾನೆ.
- ಆಹಾ! ಎಷ್ಟು ಸುಂದರವಾದ ನೋಟ.
5. ಸಂಬಂಧಾರ್ಥಕಾವ್ಯಯ (ಸಂಬಂಧಾರ್ಥಕ ಅವ್ಯಯ)
ಎರಡು ಪದಗಳನ್ನು ಅಥವಾ ಎರಡು ವಾಕ್ಯಗಳನ್ನು ಜೋಡಿಸಲು ಬಳಸುವ ಪದಗಳಿಗೆ ಸಂಬಂಧಾರ್ಥಕಾವ್ಯಯ ಎನ್ನುತ್ತಾರೆ. ಇವುಗಳಿಗೆ 'ಸಮುಚ್ಚಯಾವ್ಯಯ' ಎಂದೂ ಕರೆಯುತ್ತಾರೆ.
ಉದಾ: ಮತ್ತು, ಅಥವಾ, ಹಾಗೂ, ಆದ್ದರಿಂದ, ಅಲ್ಲದೆ, ಆದರೆ, ಅದಕ್ಕಾಗಿ.
- ರಾಮನು ಮತ್ತು ಸೀತೆಯು ಕಾಡಿಗೆ ಹೋದರು.
- ನೀನು ಓದು ಅಥವಾ ಆಟವಾಡು.
- ಹೆಚ್ಚು ಮಳೆಯಾದುದರಿಂದ ಕಾಶಿ ದೇವಾಲಯ ಮುಳುಗಡೆಯಾಯಿತು.
- ಮೂರ್ತಿ ಮತ್ತು ಕೀರ್ತಿ ಸ್ನೇಹಿತರು
6. ಕ್ರಿಯಾರ್ಥಕಾವ್ಯಯ (ಕ್ರಿಯಾರ್ಥಕ ಅವ್ಯಯ)
ಕ್ರಿಯಾಪದದ ಸ್ಥಾನದಲ್ಲಿ ನಿಂತು, ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯ ಪದಗಳನ್ನು ಕ್ರಿಯಾರ್ಥಕಾವ್ಯಯ ಎನ್ನುತ್ತಾರೆ. ಇವುಗಳು ಸಾಮಾನ್ಯವಾಗಿ ಒಂದು ನಿರ್ಣಯ ಅಥವಾ ಸ್ಥಿತಿಯನ್ನು ಸೂಚಿಸುತ್ತವೆ.
ಉದಾ: ಸಾಕು, ಬೇಕು, ಬೇಡ, ಉಂಟು, ಅಲ್ಲ, ಹೌದು, ಇಲ್ಲ.
- ನನಗೆ ಈ ಕೆಲಸ ಬೇಡ.
- ಹಣ ಉಂಟು.
- ಮಾತು ಕೇಳಬೇಡ
7. ಕೃದಂತಾವ್ಯಯ (ಕೃದಂತ ಅವ್ಯಯ)
ಧಾತುಗಳಿಗೆ (ಕ್ರಿಯಾಪದದ ಮೂಲ ರೂಪ) ಕೆಲವು ಕೃತ್ ಪ್ರತ್ಯಯಗಳು (ಉದಾ: -ಉತ್ತ, -ದೆ, -ದು) ಸೇರಿ ರೂಪಾಂತರಗೊಳ್ಳದೆ ಅವ್ಯಯಗಳಾಗಿ ಬಳಕೆಯಾಗುವ ಪದಗಳು.
ಉದಾ: ಉತ, ಉತ್ತ, ಅದೆ, ದರೆ, ಅಲ್ಲು, ಆಲಿಕ್ಕೆ, ಅ, ಇ, ದು
- ಅವನು ಓದುತ್ತಾ ಬರುತ್ತಾನೆ. (ಓದು + ಉತ್ತ = ಓದುತ್ತಾ)
- ಆಹಾರ ತಿನ್ನದೆ ಹೋಗಬೇಡ. (ತಿನ್ನು + ಅದೆ = ತಿನ್ನದೆ)
- ಪತ್ರ ಬರೆಯಲು ಕಾರಣವೇನು? (ಬರೆ + ಅಲು = ಬರೆಯಲು)
- ಪುಸ್ತಕ ಬರೆದು ಮುಗಿಸು. (ಬರೆ + ದು = ಬರೆದು)
8. ತದ್ಧಿತಾಂತಾವ್ಯಯ (ತದ್ಧಿತಾಂತ ಅವ್ಯಯ)
ನಾಮಪ್ರಕೃತಿಗಳಿಗೆ (ನಾಮಪದದ ಮೂಲ ರೂಪ) ಕೆಲವು ತದ್ಧಿತ ಪ್ರತ್ಯಯಗಳು ಸೇರಿ ಅವ್ಯಯಗಳಾಗಿ ಬಳಕೆಯಾಗುವ ಪದಗಳು.
ಉದಾ: ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗ,
- ಸೀತೆಯಂತೆ ಊರ್ವಶಿಯು ಗುಣವಂತೆ. (ಅಂತೆ ಪ್ರತ್ಯಯ).
- ನಾನು ಮನೆಯ ತನಕ ಬರುತ್ತೇನೆ. (ತನಕ ಪ್ರತ್ಯಯ)
9. ಅವಧಾರಣಾರ್ಥಕಾವ್ಯಯ (ಅವಧಾರಣಾರ್ಥಕ ಅವ್ಯಯ)
ಒಂದು ವಿಷಯದ ಬಗ್ಗೆ ನಿಶ್ಚಿತವಾದ ಅಥವಾ ಖಚಿತವಾದ ಅರ್ಥವನ್ನು ಸೂಚಿಸಲು ಬಳಸುವ ಅವ್ಯಯಗಳು. ಸಾಮಾನ್ಯವಾಗಿ 'ಏ' ಎಂಬ ಸ್ವರವು ಇದಕ್ಕೆ ಸೇರಿಕೊಳ್ಳುತ್ತದೆ.
ಉದಾ: ನೀವೇ, ರಾಮನೇ, ನನ್ನದೇ, ಅವನೇ, ಅದುವೇ, ಅವರೇ
- ಇದನ್ನು ಮಾಡಿದ್ದು ನಾನೇ.
- ಅವನೇ ನಿಜವಾದ ಹೀರೋ.
- ಅವನೇ ನಿನ್ನ ತಮ್ಮ.
10. ಪ್ರಶ್ನಾರ್ಥಕಾವ್ಯಯ (ಪ್ರಶ್ನಾರ್ಥಕ ಅವ್ಯಯ)
ಏನಾನ್ನಾದರೂ ಪ್ರಶ್ನಿಸುವಾಗ ಬಳಸುವ ಅವ್ಯಯಗಳನ್ನು 'ಪ್ರಶ್ನಾರ್ಥಕಾವ್ಯಯಗಳು' ಎನ್ನುತ್ತಾರೆ.
ಉದಾ: ಎ, ಏ, ಓ, ಏನು
- ಅವರು ಬಂದರೇ? (ಏ)
- ನೀನು ಬರುತ್ತೀಯೋ (ಓ)
- ನಿನ್ನ ಅಭಿಪ್ರಾಯ ಏನು? (ಉ)
- ನನ್ನೊಡನೆ ಬರುವೆಯಾ? (ಆ)
ಅವ್ಯಯಗಳು ಕನ್ನಡ ವ್ಯಾಕರಣದ ಅವಿಭಾಜ್ಯ ಅಂಗಗಳಾಗಿವೆ. ಅವು ವಾಕ್ಯಗಳಿಗೆ ಹೆಚ್ಚು ಸ್ಪಷ್ಟತೆ, ಭಾವ ಮತ್ತು ಸಂಬಂಧವನ್ನು ತಂದುಕೊಡುತ್ತವೆ. ಅವುಗಳ ಸರಿಯಾದ ಬಳಕೆಯು ಭಾಷೆಯ ಸೊಗಸನ್ನು ಹೆಚ್ಚಿಸುತ್ತದೆ. ಈ ಬ್ಲಾಗ್ ಪೋಸ್ಟ್ "ಅವ್ಯಯಗಳು" ಕುರಿತು ನಿಮಗೆ ಸಮಗ್ರ ತಿಳುವಳಿಕೆ ನೀಡಿದೆ ಎಂದು ಭಾವಿಸುತ್ತೇವೆ.

ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!
ದೈನಂದಿನ ಪಂಚಾಂಗ
ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.
ತತ್ಸಮಾನ ಜ್ಞಾನ ಪುಟಗಳು
ಹೊಸ ಜ್ಞಾನ ಪುಟಗಳು
ಹೊಸ ಪ್ರಚಲಿತ ಪುಟಗಳು





