ಸುಮ ಸುಂದರ ತರುಲತೆಗಳ

ಸಾ. ಶಿ. ಮರುಳಯ್ಯ

ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ

ಸುಪ್ರಭೋಧ ಚಂದ್ರೋದಯ ರಾಗರುಣ ಜ್ವಾಲೆ

ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ದೀರೆ

ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತ ಲೋಲೆ

ಮಲೆನಾಡಿನ ಕೋಗಿಲೆಯೆ ಬಯಲುನಾಡ ಮಲ್ಲಿಗೆಯೆ

ವಂಗ ವಿಷಯ ಭೃಂಗವೆ ಧವಳಗಿರಿಯ ಶೃಂಗವೆ

ಕಾವೇರಿ, ಗೋಧಾವರಿ, ಗಂಗೆ ಯಮುನೆ ಸಿಂಧುವೆ

ಶತ ಶತ ಶತಮಾನಗಳ ಗುಪ್ತಗಾಮಿನಿ ಚೇತನವೆ

ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೆ

ಚಿಲಿಪಿಲಿಯಂಥಾ ಮೋದದಿ ನಲಿದುಲಿವ ಕೂಜನವೆ

ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೆ

ನಸು ಹಸುರಿನ ಹಿಮ ಮಣಿಯೆ

ಎಳೆ ಬಿಸಿಲಿನ ಮೇಲುದಿಯೆ

ಬಿರಿದ ಮುಗಿಲ ಬಿಂಕವೆ

ತೆರೆದ ಸೋಗೆ ನರ್ತನವೆ