ನಾಕುತಂತಿ

ದ. ರಾ. ಬೇಂದ್ರೆ
ಆವು ಈವಿನ
ನಾವು ನೀವಿಗೆ
ಆನು ತಾನಾದ
ತನನನಾs || ಪ ||
ನಾನು ನೀನಿನ
ಈನಿನಾನಿಗೆ
ಬೇನೆ ಏನೋ?
ಜಾಣಿ ನಾs || 1 ||
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
ರಸ್ವನಾ || 2 ||
ಹತವೋ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ || 3 ||
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ
ತಸ್ತನಾ. || 4 ||