ಮುಗಿಲ ಮಾರಿಗೆ ರಾಗರತಿಯ

ದ. ರಾ. ಬೇಂದ್ರೆ

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತs

ಆಗ ಸಂಜೆಯಾಗಿತ್ತ

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs

ಗಾಳಿಗೆ ಮೇಲಕ್ಕೆದ್ದಿತ್ತs

ಬಿದಿಗೆ ಚಂದ್ರನಾ ಚೊಗ ಚೀ-ನಗಿ-ಹೂ ಮೆಲ್ಲಗ ಮೂಡಿತ್ತs

ಮ್ಯಾಲಕ ಬೆಳ್ಳಿನ ಕೂಡಿತ್ತ

ಇರುಳ ಹೆರಳಿನಾ ಅರಳ ಮಲ್ಲಿಗೀ ಜಾಳಿಗಿ ಹಾಂಗಿತ್ತ

ಸೂಸ್ಯಾವ ಚಿಕ್ಕಿ ಅತ್ತಿತ್ತ

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs

ತಿರುಗಿ ಮನೀಗೆ ಸಾಗಿತ್ತ

ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ್ ಸುಳಿತಿತ್ತs

ಎರಗಿ ಹಿಂದಕ್ಕುಳಿತಿತ್ತ

ಮಳೆಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತs

ಮತಮತ ಬೆರಗಿಲೆ ಬಿಡತಿತ್ತ

ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬಿನ್ನಿಲೆ ಬರತಿತ್ತs

ತನ್ನ ಮೈಮರ ಮರೆತಿತ್ತ