ಬ್ರಮ್ಮ ನಿಂಗೆ ಜೋಡಿಸ್ತೀನಿ

ಜಿ. ಪಿ. ರಾಜರತ್ನಂ

ಬ್ರಮ್ಮ ನಿಂಗೆ ಜೋಡಿಸ್ತೀನಿ

ಯೆಂಡ ಮುಟ್ಟಿದ್ ಕೈನ

ಬೂಮಿ ಎದ್ಕು ಬೊಗ್ಗಿಸ್ತೀನಿ

ಯೆಂಡ ತುಂಬ್ಕೊಂಡ್ ಮೈನ

ಬುರ್ ಬುರ್ ನೊರೆ ಬಸಿಯೋವಂತ

ಒಳ್ಳೆ ವುಳಿ ಯೆಂಡ

ಕೊಡ್ತೀನ್ ನನ್ದು ಪ್ರಾತ್ನೆ ಕೇಳು

ಸರಸೋತಮ್ಮನ್ ಗಂಡ

ಸರಸೋತಮ್ಮ ಮುನಸ್ಕೊಂಡೌಳೆ

ನೀನಾರ್ ಒಸಿ ಯೋಳು

ಕುಡುದ್ಬುಟ್ ಆಡ್ದ್ರೆ ತೊಲ್ತಾದಣ್ಣ

ನಾಲ್ಗೆ ಬಾಳ ಗೋಳು

ಕಮಲದ್ ಊವಿನ್ ಕುರ್ಚಿ ಮೇಗೆ

ಜೋಕಾಗ್ ಕುಂತ್ಕೊ ನೀನು

ನಾಕೂ ಬಾಯ್ಗೂ ನಾಕು ಬುಂಡೆ

ಯೆಂಡ ತತ್ತೀನ್ ನಾನು

ಸರಸೋತಮ್ಮಂಗ್ ಯೇಳಾಕಿಲ್ಲ

ನೀನೇನ್ ಎದರ್ಕೋಬೇಡ

ಕೇಳಿದ್ ವರಾನ್ ವೊಂದೀಸ್ಕೊಟ್ರೆ

ತಕ್ಕೊ ಎಂಡದ್ ಫೇಡ