ಗಗನದಿ ಸಾಗಿವೆ ಬಾಗಿವೆ ಮೋಡ
ಹೋಗಿವೆ ನೀರನು ಸುರಿದು
ಬರುವೆವು ಬಂದೇ ಬರುವವು ನೋಡ
ತುಂಬಿಸಿ ತುಳುಕಿಸಿ ಹರಿದು
ಇಳೆಗೂ ಬಾನಿಗು ಮಳೆ ಜೋಕಾಲಿ
ತೂಗಿದೆ ತಂಗಿದೆ ಚೆಲುವು
ಹಸುರೇ ಹಬ್ಬಿದೆ ಹಸುರೇ ತಬ್ಬಿದೆ
ಹೆಸರಿಗು ಕಾಣದ ನೆಲವು
ನಸುಕೋ, ಸಂಜೆಯೋ, ಮಿಸುಕದು ಬಳಕು
ತಾಯಿಯ ಮೊಲೆಗಿದೆ ಕೂಸು
ಇರುಳೇ ಹೊರಳಿತು, ಹಗಲೇ ಮರಳಿತು
ಚಿಗುರೆಲೆ ಹೂವಿಗೆ ಹಾಸು
ಬೇಸಗೆ ಬಣಬಣ, ಚಳಿಗೋ ಒಣಒಣ
ಶ್ರಾವಣ ತಣ್ಣಗೆ ನಡುವೆ
ಎಲ್ಲಿದೆ ಬೆಂಕಿ? ಎಲ್ಲಿದೆ ಬೆಳಕು?
ಬಿಸುವ ಗಾಳಿಗೆ ಬಿಡುವೆ?
ನೀರೇ ಹರಿದಿದೆ, ನೀರೇ ಬೆರೆದಿದೆ
ನೀರೇ ಕರೆದಿದೆ ಮೊರೆದು
ಯಾರೆ? ಎಂದರು, ನೀರೇ ಬರುವುದು
ಬೆನ್ನಿನ ಹಿಂದೆಯೆ ಸರಿದು
ಬೆಚ್ಚಗೆ ಒಳಗೆ, ಹಚ್ಚಗೆ ಹೊರಗೆ
ಹುಚ್ಚನು ಬಿಡಿಸಿದೆ ಮಳೆಯು
ಎಚ್ಚರ ಎಚ್ಚರ ಎನ್ನುತ ಹರಿದಿದೆ
ತುಂಬಿದ ಬಾಳಿನ ಹೊಳೆಯು
