Gyanpeeth Award

ಭಾರತೀಯ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿ

'ಭಾರತೀಯ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿ' ಯು ಭಾರತೀಯ ಭಾಷೆಗಳಲ್ಲಿ ಸರ್ವೋತ್ಕೃಷ್ಟ ಸೃಜನಾತ್ಮಕ ಕೃತಿಯೆಂದು ಪರಿಗಣಿತವಾದ ಗ್ರಂಥವೊಂದಕ್ಕೆ ಪ್ರತಿ ವರ್ಷವೂ ಸಲ್ಲುವ ಶ್ರೇಷ್ಠ ಪಾರಿತೋಷಕವಾಗಿದೆ. ಕನ್ನಡದಲ್ಲಿ ಈವರೆಗೆ ಎಂಟು ಸಾಹಿತ್ಯ ಶ್ರೇಷ್ಠರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕುವೆಂಪು
೧೯೬೮ ಶ್ರೀ ರಾಮಾಯಣ ದರ್ಶನಂ

ಕುವೆಂಪು

'ಕುವೆಂಪು' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಸಾಹಿತ್ಯದ ದಿಗ್ಗಜರಲ್ಲೊಬ್ಬರು.

ಭಾರತೀಯ ಜ್ಞಾನಪೀಠವು ೧೯೬೮ ರ ಸಾಹಿತ್ಯ ಪುರಸ್ಕಾರವನ್ನು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಮಹಾಕಾವ್ಯವಾದ 'ಶ್ರೀ ರಾಮಾಯನ ದರ್ಶನಂ' ಕೃತಿಗೆ ನೀಡಿದೆ. ಈ ಕೃತಿಯು ೧೯೩೫ರಿಂದ ೧೯೬೦ರವರೆಗೆ ಪ್ರಕಾಶಿಸಲಾದ ಕೃತಿಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

೧೯೪೯ ರಲ್ಲಿ ಪ್ರಕಟಗೊಂಡ 'ಶ್ರೀ ರಾಮಾಯನ ದರ್ಶನಂ' ಕುವೆಂಪುರವರ ಹತ್ತು ವರ್ಷಗಳ ಸತತ ಸಾಧನೆಯ ಫಲ.

ದ. ರಾ. ಬೇಂದ್ರೆ
೧೯೭೩ ನಾಕುತಂತಿ

ದ. ರಾ. ಬೇಂದ್ರೆ

ಭಾರತೀಯ ಜ್ಞಾನಪೀಠದ ೧೯೭೩ ನೆಯ ಸಾಹಿತ್ಯ ಪುರಸ್ಕಾರವನ್ನು ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರಿಗೆ, ಅವರ ಕಾವ್ಯ ಸಂಗ್ರಹ 'ನಾಕುತಂತಿ'ಯನ್ನು ಸರ್ವ ಶ್ರೇಷ್ಠವೆಂದು ನಿರ್ಣಯಿಸಿ ಗೌರವವನ್ನು ಸಮರ್ಪಿಸಲಾಗಿದೆ.

ಡಾ|| ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ. ಜಾನಪದ ಗೀತೆಗಳ ಧಾಟಿಯಲ್ಲಿ ಹುಟ್ಟಿದ ಗೀತೆಗಳು ಕಲಿತವರನ್ನೂ, ಕಲಿಯದವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ.

ಶಿವರಾಮ ಕಾರಂತ
೧೯೭೭ ಮೂಕಜ್ಜಿಯ ಕನಸುಗಳು

ಶಿವರಾಮ ಕಾರಂತ

ಭಾರತೀಯ ಜ್ಞಾನಪೀಠದ ಸಾಹಿತ್ಯ ಪುರಸ್ಕಾರವು ಡಾ. ಶಿವರಾಮ ಕಾರಂತರಿಗೆ, ಅವರ ಕನ್ನಡದ ಕಾದಂಬರಿ "ಮೂಕಜ್ಜಿಯ ಕನಸುಗಳು"ಗಾಗಿ ಸಮರ್ಪಿತವಾಗಿದೆ.

ಪ್ರಶಸ್ತಿ ಪುರಸ್ಕೃತ 'ಮೂಕಜ್ಜಿಯ ಕನಸುಗಳು', ಕಾದಂಬರಿಯ ವಸ್ತು ಅಸಾಧಾರಣ ವ್ಯಕ್ತಿತ್ವದ ಒರ್ವ ವೃದ್ಧ ವಿಧವೆಯ ಸುತ್ತಲಿನ ಜೀವನದಲ್ಲಿ ಕೇಂದ್ರಿತವಾಗಿದೆ. ಒಬ್ಬ ವೃದ್ಧ ಮಹಿಳೆ, ದೇಶದ ಪ್ರಾಚೀನ ಪ್ರತಿನಿಧಿಯ ರೂಪದಲ್ಲಿ, ಒಂದು ಅಶ್ವತ್ಥ ವೃಕ್ಷದ ಕೆಳಗೆ ಕುಳಿತಿದ್ದ ತಮ್ಮ ಮೊಮ್ಮಗನಿಗೆ ಅತೀತತದ ಚಿತ್ರದ ದರ್ಶನವನ್ನು ಮಾಡಿಸುತ್ತಾಳೆ.

'ಕಡಲ ತೀರದ ಭಾರ್ಗವ' ಎಂದೇ ಪ್ರಸಿದ್ಧರಾಗಿರುವ ಕೋಟ ಶಿವರಾಮ ಕಾರಂತರು ಸಾಹಸ ಮನೋವೃತ್ತಿಯ ಸಾಹಿತಿ.

ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೯೮೩ ಚಿಕವೀರರಾಜೇಂದ್ರ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಭಾರತೀಯ ಜ್ಞಾನಪೀಠದ ೧೯೮೩ನೆಯ ಜ್ಞಾನಪೀಠ ಪುರಸ್ಕಾರವನ್ನು, 'ಶ್ರೀನಿವಾಸ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿರುವ, ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ರವರಿಗೆ, ಅವರ ಕಾದಂಬರಿ 'ಚಿಕವೀರರಾಜೆಂದ್ರ' ಕೃತಿಗೆ ಸಮರ್ಪಿಸಲಾಗಿದೆ.

'ಚಿಕವೀರರಾಜೇಂದ್ರ' ಕೊಡಗಿನ ಅಂತಿಮ ರಾಜನ ಕಥೆ. ಕುಲೀನಳೂ ಬುದ್ಧಿವಂತಳೂ ಆದ ರಾಣಿ ಮತ್ತು ಇಬ್ಬರು ಯೋಗ್ಯ ಮಂತ್ರಿಗಳಿದ್ಯಾಗ್ಯೂ, ಚಿಕವೀರರಾಜೇಂದ್ರನು ತನ್ನ ನಾಶವನ್ನು ತಡೆಯಲಾಗಲಿಲ್ಲ.

ಮಾಸ್ತಿಯವರು 'ಕನ್ನಡದ ಕಥೆಗಳ ಜನಕ'ರಾಗಿ ಬಹಳ ಖ್ಯಾತಿಯನ್ನು ಪಡೆದವರು.

ವಿ. ಕೃ. ಗೋಕಾಕ್
೧೯೯೦ ಭಾರತಸಿಂಧು ರಶ್ಮಿ

ವಿ. ಕೃ. ಗೋಕಾಕ್

ಭಾರತೀಯ ಜ್ಞಾನಪೀಠವು ಪ್ರೊ. ವಿನಾಯಕ ಕೃಷ್ಣ ಗೋಕಾಕರಿಗೆ ೧೯೭೦ರಿಂದ ೧೯೮೪ರ ಅವಧಿಯ ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೧೯೯೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

'ವಿನಾಯಕ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಗೋಕಾಕರ ಸಾಹಿತ್ಯ ಸೇವೆ ಅಪಾರ.

ಗೋಕಾಕರು ತಮ್ಮ ಜೀವಿತ ಕಾಲದಲ್ಲಿಯೇ ಕಾವ್ಯ ಋಷಿಯಾಗಿ ಮಾಡಿದಂಥಹ ಕೃತಿ 'ಭಾರತಸಿಂಧು ರಶ್ಮಿ'.

ಯು. ಆರ್. ಅನಂತಮೂರ್ತಿ
೧೯೯೪ ಸಮಗ್ರ ಸಾಹಿತ್ಯ ಸೇವೆ

ಯು. ಆರ್. ಅನಂತಮೂರ್ತಿ

ಭಾರತೀಯ ಜ್ಞಾನಪೀಠದ ೧೯೯೪ ನೆಯ ವರ್ಷದ ಜ್ಞಾನಪೀಠ ಪುರಸ್ಕಾರವು ಕನ್ನಡದ ಉತ್ಕೃಷ್ಟ ಲೇಖಕ ಡಾ. ಯು. ಆರ್. ಅನಂತಮೂರ್ತಿ ಅವರಿಗೆ, ಅವರ ೧೯೭೪ ರಿಂದ ೧೯೯೩ ರವರೆಗಿನ ಸಾಹಿತ್ಯ ಕ್ಷೇತ್ರದ ಯೋಗದಾನಕ್ಕಾಗಿ ಸಮರ್ಪಿತವಾಗಿದೆ.

ಓರ್ವ ಚಿಂತಕನಾಗಿ ಡಾ. ಅನಂತಮೂರ್ತಿಯವರು ಸಾಹಿತ್ಯದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳ ಮೇಲೆ ಒತ್ತು ಕೊಡುತ್ತಾ ಕನ್ನಡ-ಸಮೀಕ್ಷೆಯ ದಿಕ್ಕನ್ನೇ ಬದಲಾಯಿಸುವ ಸಾರ್ಥಕ ಕೆಲಸವನ್ನು ಮಾಡಿದ್ದಾರೆ.

ಗಿರೀಶ್ ಕಾರ್ನಾಡ್
೧೯೯೮ ಸಮಗ್ರ ಸಾಹಿತ್ಯ ಸೇವೆ

ಗಿರೀಶ್ ಕಾರ್ನಾಡ್

ಭಾರತೀಯ ಜ್ಞಾನಪೀಠದ ೧೯೯೮ ನೆಯ ವರ್ಷದ ಜ್ಞಾನಪೀಠ ಪುರಸ್ಕಾರವು ಕನ್ನಡದ ಪ್ರಖ್ಯಾತ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರಿಗೆ, ಭಾರತದ ಸಾಹಿತ್ಯದ ಶ್ರೀವೃದ್ಧಿಗಾಗಿ ೧೯೭೪ ರಿಂದ ೧೯೯೭ ರವರೆಗೆ ಅವರು ಮಾಡಿದ ಉತ್ಕೃಷ್ಟ ಯೋಗದಾನಕ್ಕಾಗಿ ಸಮರ್ಪಿತವಾಗಿದೆ.

ಗಿರೀಶ್ ಕಾರ್ನಾಡರು ನಾಟಕಕಾರರಾಗಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದವರು. ಆಧುನಿಕ ಕನ್ನಡ ನಾಟಕ ರಂಗಭೂಮಿಯಲ್ಲಿ ಅಗ್ರಗಣ್ಯ ಹೆಸರು ಕಾರ್ನಾಡರದು.

ಚಂದ್ರಶೇಖರ ಕಂಬಾರ
೨೦೧೦ ಸಮಗ್ರ ಸಾಹಿತ್ಯ ಸೇವೆ

ಚಂದ್ರಶೇಖರ ಕಂಬಾರ

ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

ಕಂಬಾರರು ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ್, ಬೆಳಗಾವಿ, ಧಾರವಾಡದ ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ತಂದರು. ಧಾರವಾಡದ ವರಕವಿ ಡಾ. ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು.