ತತ್ವ ಪದಗಳು

ತರವಲ್ಲ ತೆಗಿ ನಿನ್ನ ತಂಬೂರಿ

ತರವಲ್ಲ ತೆಗಿ ನಿನ್ನ ತಂಬೂರಿ

ಸ್ವರ ಬರದೇ ಬಾರಿಸದಿರು ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೇ

ಬರದೆ ಬಾರಿಸದಿರು ತಂಬೂರಿ ||

ಮದ್ದಲಿ ದನಿಯೊಳು ತಂಬೂರಿ

ಅದ ತಿದ್ದಿ ನುಡಿಸಬೇಕೊ ತಂಬೂರಿ

ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ

ಬುದ್ಧಿವಂತರಿಗೆ ತಕ್ಕ ತಂಬೂರಿ ||

ಬಾಳಬಲ್ಲವರಿಗೆ ತಂಬೂರಿ

ದೇವ ಭಾಳಾಕ್ಷ ರಚಿಸಿದ ತಂಬೂರಿ

ಹೇಳಲಿ ಏನಿದರ ಹಂಚಿಕೆ ಅರಿಯದ

ತಾಳಗೇಡಿಗೆ ಸಲ್ಲ ತಂಬೂರಿ ||

ಸತ್ಯ ಶರಧಿಯೊಳು ತಂಬೂರಿ

ನಿತ್ಯ ಉತ್ತಮರಾಡುವ ತಂಬೂರಿ

ಬತ್ತೀಸರಾಗದ್ ಬಗೆಯನರಿಯದಂಥ

ಕತ್ತಿಗಿನ್ಯಾತಕೆ ತಂಬೂರಿ ||

ಹಸನಾದ ಮ್ಯಾಳಕೆ ತಂಬೂರಿ

ಇದು ಕುಶಲರಿಗೊಪ್ಪುವ ತಂಬೂರಿ

ಶಿಶುನಾಳಧೀಶನ ಓದುಪುರಾಣದಿ

ಹಸನಾಗಿ ಬಾರಿಸೊ ತಂಬೂರಿ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.