ಕೊಡಗನ ಕೋಳಿ ನುಂಗಿತ್ತ

ಶಿಶುನಾಳ ಶರೀಫ

ಕೊಡಗನ ಕೋಳಿ ನುಂಗಿತ್ತ

ನೋಡವ್ವಾ ತಂಗಿ ಕೊಡಗನ ಕೋಳಿ ನುಂಗಿತ್ತ || ಪ ||

ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ ||

ಒಳ್ಳು ಒನಕೆಯ ನುಂಗಿ ಕಲ್ಲು ಗೂಟವ ನುಂಗಿ

ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ ||

ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ

ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ ||

ಎತ್ತು ಜತ್ತಗಿ ನುಂಗಿ ಬತ್ತ ಬಾನವ ನುಂಗಿ

ಮಕ್ಕುಟ ತಿರುವೋ ಅಣ್ಣನನ್ನ ಮೇಳಿ ನುಂಗಿತ್ತ ||

ಗುಡ್ಡ ಗವಿಯನ್ನು ನುಂಗಿ ಗವಿಯ ಇರುವೆಯು ನುಂಗಿ

ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ ತಂಗಿ ||

ಕೊಡಗನ ಕೋಳಿ ನುಂಗಿತ್ತ ||