ಹಾವು ತುಳಿದೇನೇ ಮಾನಿನಿ
ಹಾವು ತುಳಿದೇನೇ ||
ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತೇ ಗೆಳತಿ,
ದೇಹತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೇ ಗತಿಯೋ ಎಂದೆ ||
ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು,
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿದೆ ಶಿವನ ದಯದಿ ||
ಬೋಧಾನಂದವಾಗಿ ಬರಲು
ಹಾದಿಯೊಳಗೆ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಲು
ನಾದಗೊಳಿಸಿತು ನಿಜದಿ ನೋಡಿ ||
ಕಾರಡಗಿ ಊರ ಹೊರಗೆ
ದಾರಿಗಟ್ಟಿ ತರುಬಿದಂಥ
ಘೋರ ತರದ ಉರಗ ಅದರ
ಕ್ವಾರಿ ಹಲ್ಲು ಮುರಿವ ತೆರದಿ ||
ಸತ್ಯ ಶಿಶುನಾಳಧೀಶ ದೇವನ
ನಿತ್ಯ ಸೇವಿಸುವಂಥ ಮಾನಿಗೆ
ಕತ್ತಲಲ್ಲಿ ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣ ನಾಗರ ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.
