ತಿಂಗಳಾಯಿತೆ

ಕೆ. ಎಸ್. ನರಸಿಂಹಸ್ವಾಮಿ

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ

ಮುಂದೆ ನಿಂದಳು ನನ್ನ ಕೈ ಹಿಡಿದ ಹುಡುಗಿ

ಇನ್ನೆಂದು ಬರುವಿರೆಂದೆನ್ನ ಕೇಳಿದಳು;

ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ,

ಕಣ್ಣೀರಲು ತಿಳಿಬಾನ ಕಿರುತಾರೆಯಂತೆ,

ವೇಣಿಯಿರಲು ವಸಂತ ಪುಷ್ಪವನದಂತೆ

ಮನಸು ಬಾರದು ನನಗೆ ಅಡಿಯನಿಡೆ ಮುಂದೆ

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ

ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ -

ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು

ಹೊರಟು ಹೋದುದು ಬಂಡಿ ಎಂದು ಹೇಳಿದನು

ಹಿಂದಿರುಗಿ ಬಂದೆನ್ನನೊಂದೆ ಮಾತಿನಲಿ

'ತಿಂಗಳಾಯಿತೆ?' ಎಂದಳೆನ್ನ ಹೊಸಹುಡುಗಿ!