ಅಲಂಕಾರಗಳು: ಅರ್ಥಾಲಂಕಾರ

ಮನುಷ್ಯ ಉಡುಗೆ ತೊಡುಗೆಗಳಿಂದ ಹೇಗೆ ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾನೆಯೋ, ಹಾಗೇಯೇ ಮಾತನಾಡುವಾಗ ಕೇಳುಗರನ್ನು ಆಕರ್ಷಿಸಲು, ಹರ್ಷಿಸಲು, ವಿಷಯವನ್ನು ಮನದಟ್ಟು ಮಾಡಲು ಶಬ್ದಗಳನ್ನು ಕಿವಿಗೆ ಇಂಪಾಗುವಂತೆ, ಅರ್ಥ ಹೆಚ್ಚಿಸುವಂತೆ ಚಮತ್ಕಾರಿಕ ರೀತಿಯಲ್ಲಿ ಬಳಸುವುದು ರೂಡಿ. ಇದಕ್ಕೆ ಭಾಷೆಯ ಅಲಂಕಾರಗಳೆನ್ನುತ್ತಾರೆ. ಅಲಂಕಾರಗಳು ಕಾವ್ಯದ, ಗದ್ಯದ ಸೊಬಗನ್ನು ಹೆಚ್ಚಿಸುವುದಲ್ಲದೆ, ಕೇಳುಗರ ಗಮನವನ್ನು ಸೆಳೆಯುವಂತೆ ಮಾಡುತ್ತದೆ.

ಅಲಂಕಾರಗಳಲ್ಲಿ ಎರಡು ವಿಧ.

ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು. ಅಲಂಕಾರಿಕ ಮಾತುಗಳು ಅರ್ಥ ಚಮತ್ಕಾರಗಳನ್ನು ಒಳಗೊಂಡಿದ್ದರೆ, ಅವುಗಳಿಗೆ 'ಅರ್ಥಾಲಂಕಾರ'ಗಳೆನ್ನುವರು.

Alankaragalu
ಅಲಂಕಾರ ವಿಧಗಳು

ಅರ್ಥಾಲಂಕಾರಗಳು

ಪದಗಳ, ಅರ್ಥಗಳ ಚಮತ್ಕಾರಗಳಿಂದ ಕಾವ್ಯ ಅಥವಾ ಮಾತಿನ ಸೌಂದರ್ಯವನ್ನು ಹೆಚ್ಚಿಸುವುದನ್ನು ಅರ್ಥಾಲಂಕಾರವೆನ್ನುವರು.

ಸಂಸ್ಕೃತದಲ್ಲಿ ವಿದ್ವಾಂಸರು ಸುಮಾರು 120 ಅರ್ಥಾಲಂಕಾರಗಳನ್ನು ಹೆಸರಿಸುತ್ತಾರೆ. ಅರ್ಥಾಲಂಕಾರಗಳಲ್ಲಿ ಉಪಮೇಯ, ಉಪಮಾನಗಳೊಂದಿಗಿನ ಸಂಬಂಧದಿಂದ ಅಲಂಕಾರ ಯಾವುದು ಎಂದು ನಿರ್ಧರಿಸಬಹುದು.

1. ಉಪಮಾಲಂಕಾರ:

'ಉಪಮಾ' ಎಂದರೆ ಹೋಲಿಕೆ ಎಂದರ್ಥ. ಎರಡು ವಸ್ತುಗಳ ನಡುವಿನ ಪರಸ್ಪರ ಹೋಲಿಕೆಯ ಸಂಬಂಧವನ್ನು ಹೇಳುವುದೇ ಉಪಮಾಲಂಕಾರ. ವಸ್ತುಗಳಲ್ಲಿನ ಪರಸ್ಪರ ಸಾದೃಶ್ಯ ಸಂಪತ್ತನ್ನು ಹೇಳುವುದೇ ಉಪಮಾಲಂಕಾರದಲ್ಲಿ ಪ್ರಧಾನ ಅಂಶ. ಇಲ್ಲಿ ಉಪಮಾನ ಮತ್ತು ಉಪಮೇಯಗಳ ನಡುವೆ ಪರಸ್ಪರ ಹೋಲಿಕೆಯ ಸಂಬಂಧವನ್ನು ಹೇಳಲಾಗುತ್ತದೆ.

ಉಪಮಾಲಂಕಾರವು ಉಪಮಾನ, ಉಪಮೇಯ, ಸಮಾನಧರ್ಮ, ಉಪಮಾವಾಚಕ ಪದ ನಾಲ್ಕು ಅಂಶಗಳಿಂದ ಕೂಡಿರುತ್ತದೆ.

ಉಪಮೇಯ:- ಯಾವುದು ವರ್ಣಿಸಲ್ಪಡುತ್ತದೆಯೋ ಅದು ಉಪಮೇಯ. ಇದನ್ನು ವರ್ಣ್ಯ ಎಂದೂ ಕರೆಯಲಾಗುತ್ತದೆ.

ಉಪಮಾನ:- ವರ್ಣಿಸುತ್ತಿರುವುದಕ್ಕೆ ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಅಥವಾ ಮಾನವನ್ನಾಗಿ ಇಟ್ಟುಕೊಂಡು ವರ್ಣಿಸಲಾಗಿದೆಯೋ ಅದು ಉಪಮಾನ ಇದನ್ನ ಅವರ್ಣ್ಯವೆಂದೂ ಕರೆಯುತ್ತಾರೆ.

ಸಮಾನಧರ್ಮ:- ಉಪಮಾನ ಮತ್ತು ಉಪಮೇಯ ಇವೆರಡರ ನಡುವೆ ಹೊಲಿಕೆಯ ಸಂಂಧವನ್ನು ಕಲ್ಪಿಸಬೇಕಾದರೆ ಅವೆರಡರಲ್ಲೂ ಸಮಾನವಾದ ಗುಣ ಲಕ್ಷಣಗಳಿರಬೇಕಾಗುತ್ತದೆ. ಅದನ್ನೇ ಸಮಾನ ಧರ್ಮವೆನ್ನುತ್ತಾರೆ.

ಉಪಮಾವಾಚಕ ಪದ:- ಉಪಮಾನ ಮತ್ತು ಉಪಮೇಯಗಳ ನಡುವೆ ಸಂಬಂಧವನ್ನು ಏರ್ಪಡಿಸುವ ಅಂದದಿ, ಹಾಗೆ, ಅಂತೆ, ವೋಲ್, ಅಂತೆವೋಲ್, ರೀತಿ ಇತ್ಯಾದಿ ಪದಗಳೇ ಉಪಮಾವಾಚಕ ಪದಗಳು.

ಉದಾ:-

"ಅಳುವ ಕಂದನ ತುಟಿಯು ಹವಳಾದ ಕುಡಿ ಹಾಂಗ" --- ಜನಪದ ಗೀತೆ


ಉಪಮೇಯ: ಅಳುವ ಕಂದನ ತುಟಿ

ಉಪಮಾನ: ಹವಳದ ಕುಡಿ

ಉಪಮಾವಾಚಕ ಪದ: ಹಾಂಗ

ಸಮಾನಧರ್ಮ: ಸ್ಪಷ್ಟವಾಗಿಲ್ಲ (ಕೆಂಪಾಗಿರುವುದು)

ಸಮನ್ವಯ: ಈ ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ ಅಳುವ ಕಂದನ ತುಟಿ ಎಂಬುದನ್ನು ಉಪಮಾನವಾದ ಹವಳದ ಕುಡಿಗೆ ಹೋಲಿಸಲಾಗಿದೆ. ಇಲ್ಲಿ ಉಪಮೇಯವು ಉಪಮಾನದಂತಿದೆ ಎಂದು ಇವೆರಡರ ನಡುವೆ ಹೊಲಿಕೆಯ ಸಂಬಂಧವನ್ನು ಕಲ್ಪಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಉಪಮಾಲಂಕಾರದಲ್ಲಿ ಎರಡು ವಿಧಗಳಿವೆ.

 1. ಪೂರ್ಣೋಪಮಾಲಂಕಾರ
 2. ಲುಪ್ತೋಪಮಾಲಂಕಾರ

1. ಪುರ್ಣೋಪಮಾಲಂಕಾರ:

ಉಪಮಾನ, ಉಪಮೇಯ ಉಪಮಾವಾಚಕ ಪದ, ಸಮಾನಧರ್ಮ ಈ ನಾಲ್ಕು ಅಂಶಗಳನ್ನು ಒಳಗೊಂಡಿರುವ ಅಲಂಕಾರವೇ ಪೂರ್ಣೋಪಮಾಲಂಕಾರ.

ಉದಾಹರಣೆ:-

1. ಉದಯಿಸುತ್ತಿರುವ ಸೂರ್ಯ ನಾರಿಯ ಹಣೆಯ ತಿಲಕದಂತೆ ಕೆಂಪಗೆ ಶೋಭಿಸುತ್ತಿದ್ದಾನೆ.


ಉಪಮೇಯ: ಉದಯಿಸುತ್ತಿರುವ ಸೂರ್ಯ

ಉಪಮಾನ: ನಾರಿಯ ಹಣೆಯ ತಿಲಕ

ಉಪಮಾವಾಚಕ ಶಬ್ದ: ಅಂತೆ

ಸಮಾನಧರ್ಮ: ಕೆಂಪಗೆ ಶೋಭಿಸುತ್ತಿರುವುದು.


ಸಮನ್ವಯ: ಮೇಲಿನ ಅಲಂಕಾರದಲ್ಲಿ ಉಪಮೇಯವಾದ ಉದಯಿಸುತ್ತಿರುವ ಸೂರ್ಯನನ್ನು ಉಪಮಾನವಾದ ನಾರಿಯ ಹಣೆಯ ತಿಲಕಕ್ಕೆ ಹೋಲಿಸಿ ಉಪಮೇಯ ಉಪಮಾನದಂತಿದೆ ಎಂದು ವರ್ಣಿಸಿರುವುದರಿಂದ ಇದು ಉಪಮಾಲಂಕಾರ ಇಲ್ಲಿ ಉಪಮಾನ, ಉಪಮೇಯ, ಸಮಾನಧರ್ಮ, ಉಪಮಾವಾಚಕ ಪದ ಇತ್ಯಾದಿಗಳನ್ನು ಸ್ಪಷ್ಟವಾಗಿ ಹೇಳಿರುವುದರಿಂದ ಇದು ಪೂರ್ಣೋಪಮಾಲಂಕಾರವಾಗಿದೆ.2. "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡ ನುಡಿ."


ಉಪಮೇಯ: ಕನ್ನಡ ನುಡಿ

ಉಪಮಾನ: ಸುಲಿದ ಬಾಳೆಯ ಹಣ್ಣು

ಉಪಮಾವಾಚಕ ಪದ: ಅಂದದಿ

ಸಮಾನಧರ್ಮ: ಸುಲಭವಾಗಿರುವುದು, ಲಲಿತವಾಗಿರುವುದು


ಸಮನ್ವಯ: ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ ಕನ್ನಡನುಡಿಯನ್ನು ಉಪಮಾನವಾದ ಸುಲಿದ ಬಾಳೆಹಣ್ಣಿಗೆ ಹೋಲಿಸಲಾಗಿದೆ. ಉಪಮೇಯ, ಉಪಮಾನದಂತಿದೆ ಎಂದು ವರ್ಣಿಸಿರುವುದರಿಂದ ಇದು ಉಪಮಾಲಂಕಾರ. ಇಲ್ಲಿ ಉಪಮಾನ, ಉಪಮೇಯ, ವಾಚಕಪದ, ಸಮಾನಧರ್ಮ ಇತ್ಯಾದಿಗಳನ್ನು ಸ್ಪಷ್ಟವಾಗಿ ಹೇಳಿರುವುದರಿಂದ ಇದು ಪೂರ್ಣೋಪಮಾಲಂಕಾರ.


2. ಲುಪ್ತೋಪಮಾಲಂಕಾರ:-

ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ವಾಚನಪದ, ಸಮಾನಧರ್ಮ ಇವುಗಳಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿ ಹೇಳಲ್ಪಡದೇ ಇರುವುದು ಲುಪ್ತೋಪಮಾಲಂಕಾರ.

ಉಪಮೇಯ ಸ್ಪಷ್ಟವಾಗಿಲ್ಲದಿದ್ದರೆ ಅದು ಉಪಮೇಯ ಲುಪ್ತೋಪಮೆ, ಸಮಾನಧರ್ಮ ಸ್ಪಷ್ಟವಾಗಿಲ್ಲದಿದ್ದರೆ ಧರ್ಮ ಲುಪ್ತೋಪಮೆ.

ಇದರಲ್ಲಿ ಧರ್ಮಲುಪ್ತೋಪಮೆ, ವಾಚಕಲುಪ್ತೋಪಮೆ, ವಾಚಕಧರ್ಮಲುಪ್ತೋಪಮೆ, ವಾಚಕ ಧರ್ಮೋಪಮಾನಲುಪ್ತೋಪಮೆ ಎಂಬ ವಿಧಗಳಿವೆ.

ಉದಾಹರಣೆಗಳು:-

1. "ಬೆಲ್ಲ ಹಾಕದ ಪರಮಾನ್ನದಂತೆ"


ಉಪಮೇಯ: ಸ್ಪಷ್ಟವಾಗಿಲ್ಲ (ಎಲ್ಲ ಒಂದೇ ಎಂಬ ಅರಿವನ್ನು ಹೊಂದಿರುವ ವ್ಯಕ್ತಿ ಮಾಡುವ ಸಾಧನೆಗಳು).

ಉಪಮಾನ: ಬೆಲ್ಲಹಾಕದ ಪರಮಾನ್ನ

ಉಪಮಾವಾಚಕ: ಅಂತೆ

ಸಮಾನಧರ್ಮ: ಸ್ಪಷ್ಟವಾಗಿಲ್ಲ (ರುಚಿಯಿಲ್ಲದಿರುವಿಕೆ, ಫಲದೊರೆಯದೆ ಇರುವುದು)


ಸಮನ್ವಯ: ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ. ಎಲ್ಲ ಒಂದೆ ಎಂಬ ಅರಿವನ್ನು ಹೊಂದಿರುವ ವ್ಯಕ್ತಿ ಮಾಡುವ ಎಲ್ಲ ಸಾಧನೆಗಳನ್ನು ಉಪಮಾನವಾದ ಬೆಲ್ಲಹಾಕದ ಪರಮಾನಕ್ಕೆ ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ. ಈ ಅಲಂಕಾರ ವಾಕ್ಯದಲ್ಲಿ ಉಪಮಾನ, ಸಮಾನ ಧರ್ಮಗಳು ಸ್ಪಷ್ಟವಾಗಿ ಹೇಳಿರದ ಕಾರಣ ಇದು ಲುಪ್ತೋಪಮಾಲಂಕಾರ.2.
"ಅಳುವ ಕಂದನ ತುಟಿಯು ಹವಳದ ಕುಡಿ ಹಾಂಗ

ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ

ಶಿವನ ಕೈಯಲಗು ಹೊಳೆದಂಗ"


ಅಲಂಕಾರ ವಾಕ್ಯ:- ಕುಡಿಹುಬ್ಬು ಬೇವಿನೆಸಳಂಗ

ಉಪಮೇಯ: ಮಗುವಿನ ಕುಡಿಹುಬ್ಬು

ಉಪಮಾನ: ಬೇವಿನ ಎಸಳು

ಉಪಮಾವಾಚಕ: ಹಾಂಗ

ಸಮಾನಧರ್ಮ: ಸ್ಪಷ್ಟವಾಗಿಲ್ಲ (ಎಳೆಯಾಗಿ, ಮೃದುವಾಗಿ ಸೊಗಸಾಗಿರುವುದು, ಬಾಗಿರುವುದು)

ಸಮನ್ವಯ: ಈ ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ ಮಗುವಿನ ಕುಡಿಹುಬ್ಬನ್ನು ಉಪಮಾನವಾದ ಬೇವಿನ ಎಸಳಿಗೆ ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕರ. ಇಲ್ಲಿ ಸಮಾನಧರ್ಮ ಸ್ಪಷ್ಟವಾಗಿ ಹೇಳಿರದ ಕಾರಣ ಇದು ಲುಪ್ತೋಪಮಾಲಂಕಾರವಾಗಿದೆ.3.
"ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

ರಸಿಕನಲ್ಲದನ ಬರಿಮಾತು ಕಿವಿಗೆ ಕೂ

ರ್ದಸಿಯು ಬಡಿದಂತೆ ಸರ್ವಜ್ಞ"


ಉಪಮೇಯ: ರಸಿಕನಾಡಿದ ಮಾತು, ರಸಿಕನಲ್ಲದನ ಬರಿಮಾತು.

ಉಪಮಾನ: ಶಶಿಯುದಿಸಿ ಬರುವುದು, ಕಿವಿಗೆ ಕೂರ್ದಸಿ ಬಡಿಯುವುದು.

ಉಪಮಾವಚಕ ಪದ: ಅಂತೆ

ಸಮಾನಧರ್ಮ: ಸ್ಪಷ್ಟವಾಗಿಲ್ಲ (ಸೊಗಸಾಗಿರುವುದು, ಮನೋಹರವಾಗಿರುವುದು/ನೋವಾಗುವುದು, ಅಹಿತವಾಗಿರುವುದು).

ಸಮನ್ವಯ: ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯ ಮತ್ತು ಉಪಮಾನಗಳ ನಡುವೆ ಹೋಲಿಕೆಯ ಸಂಬಂಧವಿರುವುದರಿಂದ ಇದು ಉಪಮಾಂಕಾರವಾಗಿದೆ.

ಇದರಲ್ಲಿ ಸಮಾನಧರ್ಮ ಸ್ಪಷ್ಟವಾಗಿಲ್ಲದ ಕಾರಣ ಇದು ಧರ್ಮಲುಪ್ತೋಪಮೆ.


4. "ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ."


ಉಪಮೇಯ: ನೀಚರಿಗೆ ಮಾಡಿದ ಉಪಕಾರ (ನೀಚ)

ಉಪಮಾನ: ಹಾವಿಗೆ ಹಾಲೆರೆದಂತೆ (ಹಾವು)

ಉಪಮಾವಾಚಕ ಪದ: ಅಂತೆ

ಸಮಾನಧರ್ಮ: ಸ್ಪಷ್ಟವಾಗಿಲ್ಲ (ಮಾಡಿದ ಉಪಕಾರ ಮರೆತು ಅಪಕಾರವೆಸಗುವುದು ಅಥವಾ ನೀಚತನ/ವಿಷ ಇಲ್ಲವಾಗುವುದು)


ಸಮನ್ವಯ: ಮೇಲಿನ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ ನೀಚರ ಗುಣವನ್ನು ಉಪಮಾನವಾದ ಹಾವಿನ ಗುಣಕ್ಕೆ ಹೋಲಿಸಲಾಗಿದೆ. ಉಪಮೇಯ, ಉಪಮಾನದಂತಿದೆ ಎಂದು ವರ್ಣಿಸಿರುವುದರಿಂದ ಇದು ಉಪಮಾಲಂಕಾರ. ಸಮಾನಧರ್ಮ ಸ್ಪಷ್ಟವಾಗಿಲ್ಲದ ಕಾರಣ ಇದು ಧರ್ಮಲುಪ್ತೋಪಮೆ.ಉಪಮಾಲಂಕಾರಕ್ಕೆ ಮತ್ತಷ್ಟು ಉದಾಹರಣೆಗಳು:-

 • ಮೈಸೂರು ಅರಮನೆಯು ಇಂದ್ರನ ಅಮರಾವತಿಯಂತೆ ಶೋಭಿಸುತ್ತಿತ್ತು. (ಪುರ್ಣೋಪಮಾಲಂಕಾರ)
 • ರಾಹೀಲನು ಪರೀಕ್ಷಿಸುತ್ತಿದ್ದಂತೆ ನೋವೊಂದು ಅಲೆಯಂತೆ ಬಂದು ಆಕೆ ಕೂಗಿಕೊಳ್ಳುವಂತೆ ಮಾಡಿತು.
 • ಹಸುಳೆಯಂತೆ, ಕಾಂಬನಂತೆ (ಉಪಮೇಯ ಲುಪ್ತೋಪಮಾಲಂಕಾರ)
 • ಹೊಳೆ ಕಡಲಿಗೆ ಸೇರುವ ತೆರದಿ
 • ಹಾರಬಯಸೆ ನೀ ಹಕ್ಕಿಯಂತೆ
 • ಹಸುಳೆಯಂದದಿ ಒಲಿದಳು (ಉಪಮೇಯ ಲುಪ್ತೋಪಮಾಲಂಕಾರ)
 • ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು.
 • ಸೀತೆಯ ಮುಖ ಕಮಲದಂತೆ ಅರಳಿತು
 • ಸಿಡಿಲು ಸಿಡಿದಾಂಗ ಗುಂಡು ಸುರಿದಾವ
 • ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು

2. ರೂಪಕಾಲಂಕಾರ

ಉಪಮೇಯ ಮತ್ತು ಉಪಮಾನಗಳು ಎರಡೂ ಒಂದೇ ಎಂದು ಅಭೇದವನ್ನು ಕಲ್ಪಿಸಿ ಹೇಳುವುದೇ ರೂಪಕಾಲಂಕಾರ.

ಇಲ್ಲಿ ಉಪಮೇಯ ಮತ್ತು ಉಪಮಾನಗಳ ನಡುವೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ವರ್ಣಿಸಲಾಗುತ್ತದೆ. ಒಂದು ಇನ್ನೊಂದರಂತಿದೆ ಎಂದು ಹೋಲಿಸದೆ ಒಂದು ಇಂನ್ನೊಂದೇ ಎಂದು ಹೇಳಲಾಗುತ್ತದೆ.

ಉದಾಹರಣೆಗಳು:-

1. "ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ" -- ಹರಿಶ್ಚಂದ್ರ ಕಾವ್ಯ


ಉಪಮೇಯ: ಹರಿಶ್ಚಂದ್ರ

ಉಪಮಾನ: ಪುರದ ಪುಣ್ಯ

ಸಮನ್ವಯ: ಇಲ್ಲಿ ಉಪಮೇಯವಾದ 'ಹರಿಶ್ಚಂದ್ರ' ಹಾಗೂ ಉಪಮಾನವಾದ 'ಪುರದ ಪುಣ್ಯ' ಇವೆರಡರ ನಡುವೆ ಅಭೇದವಿದೆ. ಅಂದರೆ ಹರಿಶ್ಚಂದ್ರ ಮತ್ತು ಪುರದ ಪುಣ್ಯ ಇವೆರಡೂ ಬೇರೆ ಬೇರೆ ಅಲ್ಲ ಒಂದೇ ಎಂದು ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ.2. "ಗೋಪಾಲವಿಠಲನಂಘ್ರಿ ಪಲ್ಲವವನು ಕಾಣ"


ಉಪಮೇಯ: ಗೋಪಾಲವಿಠಲನ ಅಂಘ್ರಿ

ಉಪಮಾನ: ಪಲ್ಲವ (ಪದ್ಮ)

ಈ ಅಲಂಕಾರ ವಾಕ್ಯದಲ್ಲಿ ಉಮಮೇಯವಾದ ಗೋಪಾಲವಿಠಲನ ಅಂಘ್ರಿ(ಪಾದ) ಹಾಗೂ ಉಪಮಾನವಾದ ಪಲ್ಲವ(ಪದ್ಮ) ಇವೆರಡರ ನಡುವೆ ಅಭೇದವನ್ನು ಕಲ್ಪಿಸಿ ಎರಡೂ ಒಂದೇ ಎಂದು ಭಾವಿಸಿ ಹೇಳಿರುವುದರಿಂದ ಇದು ರೂಪಕಾಲಂಕಾರ.3. ಭವ ಸಮುದ್ರ


ಉಪಮೇಯ: ಭವ

ಉಪಮಾನ: ಸಮುದ್ರ

ಈ ಅಲಂಕಾರ ವಾಕ್ಯದಲ್ಲಿ ಉಪಮೇಯವಾದ ಭವ ಉಪಮಾನವಾದ ಸಮುದ್ರ ಇವೆರಡರ ನಡುವೆ ಅಭೇದವನ್ನು ಕಲ್ಪಿಸಿ ಹೇಳಿರುವುದರಿಂದ ಇದು ರೂಪಕಾಲಂಕಾರ.3.

ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ

ವಿನಿಯನೂಳಿಗ ದೇವಪೂಜೆ

ಮನನವೆವನ ನೆನೆವುದೆ ಸಾಧ್ವಿಯರಿಗೆ

ಮುನಿಸತಿಯರ ಮೋಡಿಯೇನು? --- ಹದಿಬದೆಯ ಧರ್ಮ


ಅರ್ಥ: ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡವಳಿಕೆಯು ವರ್ಣಿತವಾಗಿದೆ. ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದೇ ದೇವರಧ್ಯಾನ.

ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ. ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ, ದೇವರ ಪೂಜೆ ಇವೆರಡೂ ಒಂದೇ, ಇತ್ಯಾದಿಯಾಗಿ ಉಪಮೇಯ, ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಇದು ರೂಪಕಾಲಂಕಾರ.


ರೂಪಕಾಲಂಕಾರಕ್ಕೆ ಮತ್ತಷ್ಟು ಉದಾಹರಣೆಗಳು:-

 • ಆತ್ಮ ಸುರಭಿ
 • ಅಳ್ಳರಿಯುತಿಪ್ಪ  ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನರಿಯದೆ ಪೇಳು ವಿಶ್ವಾಮಿತ್ರ.
 • ಭೂಮಿಜಾತೆ ಆತ್ಮಕಾಮಕಲ್ಪಲತೆ
 • ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ
 • ಶಾನುಬೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು.
 • ಪ್ರೀತಿಯ ಹಣತೆಯ ಹಚ್ಚೋಣ
 • ಶೋಕದುಲ್ಕೆ
 • ಒಲುಮೆ ಬತ್ತಿದ ಎದೆಯ ಮರಳಿನಲ್ಲಿ

3. ದೃಷ್ಟಾಂತಾಲಂಕಾರ

ಉಪಮಾನ, ಉಪಮೇಯಗಳಾದ ಎರಡು ಬೇರೆ ಬೇರೆ ವಾಕ್ಯಗಳ ಅರ್ಥ ಪರಸ್ಪರ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು.

ಉದಾಹರಣೆಗಳು:-

1. ದುಷ್ಟನು ವಿದ್ಯಾವಂತನಾಗಿದ್ದರೂ ತಿಳಿದವರು ಆತನ ಸಹವಾಸವನ್ನು ಬಿಡಬೇಕು; ಸರ್ಪವು ತಲೆಯಲ್ಲಿ ಮಣಿಯನ್ನು ಧರಿಸಿದ್ದರೂ ಅದರಿಂದ ದೂರ ಇರುವುದು ಜಾನತನವಲ್ಲವೇ?


ಮೇಲಿನ ಅಲಂಕಾರ ವಾಕ್ಯದಲ್ಲಿ ಎರಡು ವಾಕ್ಯಗಳಿದ್ದು, ಮೊದಲನೆಯ ವಾಕ್ಯವು ಉಪಮೇಯದಂತೆಯೂ, ಎರಡನೆಯ ವಾಕ್ಯವು ಉಪಮಾನದಂತೆಯೂ ಇದ್ದು ವರ್ಣಿಸುತ್ತಿರುವ ವಿಷಯಕ್ಕೆ ಅಂದರೆ ಬಿಂಬಕ್ಕೆ ಮತ್ತೊಂದು ವಾಕ್ಯ ಅಥವಾ ಮಾತು ಪ್ರತಿಬಿಂಬದ ಹಾಗೆ ಬಂದಿದೆ. ಹೀಗೆ ಎರಡು ವಾಕ್ಯಗಳ ನಡುವೆ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬಗಳ ಸಂಬಂಧವಿರುವುದರಿಂದ ಇದು ದೃಷ್ಟಾಂತಾಲಂಕಾರ.


ಈ ಅಲಂಕಾರ ವಾಕ್ಯಗಳಲ್ಲಿ ದುಷ್ಟನು ವಿದ್ಯಾವಂತನಾಗಿದ್ದರೂ ಅವನ ಸಹವಾಸ ಕೆಟ್ಟದ್ದು, ಹಾವಿನ ತಲೆಯಲ್ಲಿ ಮಣಿಯಿದ್ದರೂ ಅದು ಕೆಟ್ಟದ್ದು ಎರಡರಿಂದಲೂ ಅಪಾಯ ತಪ್ಪಿದ್ದಲ್ಲ ಎಂದು ಹೇಳಲಾಗಿದೆ.


ಉಮಮೇಯ: ದುಷ್ಟ ವಿದ್ಯಾವಂತನ ಸಹವಾಸ

ಉಪಮಾನ: ತಲೆಯಲ್ಲಿ ಮಣಿಯಿರುವ ಹಾವಿನ ಸಹವಾಸ.

ಸಮನ್ವಯ: ಉಪಮಾನ ಮತ್ತು ಉಪಮೇಯ ಇವೆರಡೂ ಒಂದೇ ಅರ್ಥವನ್ನು ಪ್ರತಿಪಾದಿಸುತ್ತಿದ್ದು ಪರಸ್ಪರ ಬಿಂಬ-ಪ್ರತಿಬಿಂಬದ ಸಂಬಂಧವಿದೆ. ಆದ್ದರಿಂದ ಇದು ದೃಷ್ಟಾಂತಾಲಂಕಾರ.2.

ನಿಂದಿಸುವರ್ ದುರ್ಜನರ್ ಎಂ

ಬೊಂದು ಭಯಂಬೆತ್ತು ಸುಕವಿ ರಚಿಸನೆ ಕೃತಿಯಂ?

ಮಂದೇಹರಭಯದಿಂದರ-

ವಿಂದಸಖಂ ನಿಜ ಮಯೂಖಮಂ ಪ್ರಸರಿಸನೇ?


ಅರ್ಥ: ದುರ್ಜನರ ನಿಂದಿಸುತ್ತಾರೆಂಬ ಭಯದಿಂದ ಸುಕವಿ ಕಾವ್ಯ ರಚಿಸನೆ? ರಚಿಸಿಯೇ ರಚಿಸುತ್ತಾನೆ. ಹಾಗೆಯೇ ಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣಗಳನ್ನು ಪಸರಿಸನೇ? ಪಸರಿಸಿಯೇ ಪಸರಿಸುತ್ತಾನೆ.


ಉಪಮೇಯ: ದುರ್ಜನರ ನಿಂದೆಗೆ ಭಯಪಡದೆ ಸುಕವಿ ಕಾವ್ಯ ರಚಿಸುತ್ತಾನೆ

ಉಪಮಾನ: ಕತ್ತಲೆಯ ಭಯದಿಂದ ಸೂರ್ಯ ಸುಮ್ಮನಿರದೆ ತನ್ನ ಕಿರಣಗಳನ್ನು ಪಸರಿಸುತ್ತಾನೆ.

ಸಮನ್ವಯ: ಇಲ್ಲಿ ಉಪಮೇಯ ವಾಕ್ಯ ಮತ್ತು ಉಪಮಾನ ವಾಕ್ಯಕ್ಕೂ ಪರಸ್ಪರ ಅರ್ಥ ಸಾದೃಶ್ಯವಿದೆ. ಇವೆರಡರ ನಡುವೆ ಬಿಂಬ-ಪ್ರತಿಬಿಂಬ ಭಾವ ತೋರುವುದರಿಂದ ಇದು ದೃಷ್ಟಾಂತಾಲಂಕಾರ.3.

ಎನಿತೊಳವಪಾಯ ಕೋಟಿಗ

ಳನಿತರ್ಕಂ ಗೇಹಮಲ್ತೆ ದೇಹಮಿದಂನೆ |

ಟ್ಟನೆ ಪೊತ್ತು ಸುಖವನರಸುವ

ಮನುಜಂ ಮೊರಡಿಯೊಳೆ ಮಾದುಫಳಮನರಸದಿರಂ || -- ಯಶೋಧರ ಚರಿತೆ


ಅರ್ಥ: ಅಪಾಯಗಳೆಷ್ಟಿವೆಯೋ ಅಷ್ಟೆಲ್ಲಕ್ಕೂ ಮನೆಯಂತಿರುವ ಈ ದೇಹವನ್ನು ಧರಿಸಿ ಸುಖವೇ ಬೇಕು; ದುಃಖವು ಬೇಡ; ಎನ್ನುವ ಮನುಷ್ಯನು ಕಲ್ಲು ಮೊರಡಿಯಲ್ಲಿ ಸಿಹಿಯಾದ ಫಲವನ್ನು ಅರಸದೆ ಇರುವನೇ?


ಇಲ್ಲಿ ಅನೇಕ ಅಪಾಯಗಳನ್ನು ಪಡೆಯುವುದಕ್ಕೆ ಕಾರಣವಾದ ಈ ದೇಹವನ್ನು ಧರಿಸಿ ಕೇವಲ ಸುಖವೇ ಬೇಕು ಎನ್ನುವ ಮನುಷ್ಯನೂ, ಕಲ್ಲು ಮೊರಡಿಯ ಪ್ರದೇಶದಲ್ಲಿ ಮಾದಳ ಹಣ್ಣನ್ನು ಹುಡುಕುವ ಮನುಷ್ಯನೂ ಒಂದೇ, ಏಕೆಂದರೆ ಕಲ್ಲುಮೊರಡಿಯಲ್ಲಿ ಮಾದಳ ಫಲವು ಸಿಗದು. ಅದರಂತೆ ಮನುಷ್ಯ ದೇಹಕ್ಕೂ ಅಪಾಯಗಳು ಅನಿವಾರ್ಯ. ಅವು ಬಂದೇ ಬರುತ್ತವೆ. ಹೀಗೆ ಉಪಮೇಯ-ಉಪಮಾನ ವಾಕ್ಯಗಳಿಗೆ ಬಿಂಬ ಪ್ರತಿಬಿಂಬ ಭಾವ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.


ಮತ್ತಷ್ಟು ಉದಾಹರಣೆಗಳು:-

 1. ಊರು ಉಪಕಾರವರಿಯದು, ಹೆಣ ಶೃಂಗಾರವರಿಯದು.
 2. ಅಟ್ಟಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು.
 3. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ.
 4. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
 5. ಅಪಾಯಗಳಿಗೆಲ್ಲ ಮನೆಯಂತಿರುವ ಈ ದೇಹವನ್ನು ಧರಿಸಿ ಸುಖವೇ ಬೇಕು, ದುಃಖ ಬೇಡ ಎನ್ನುವ ಮನುಷ್ಯ ಕಲ್ಲು ಮೊರಡಿಯಲ್ಲಿ ಮಾದಳ ಫಲವನ್ನು ಅರಸದಿರುವನೆ.

4. ಅರ್ಥಾಂತರನ್ಯಾಸಾಲಂಕಾರ

ಒಂದು ವಿಶೇಷ ವಾಕ್ಯವನ್ನು, ಲೋಕ ಪ್ರಸಿದ್ಧವಾದ ಗಾದೆ, ನೀತಿ ವಾಕ್ಯ ಮುಂತಾದ ರೂಢಿಯಲ್ಲಿನ ಸಾಮಾನ್ಯ ವಾಕ್ಯಗಳಿಂದ ಸಮರ್ಥಿಸುವುದೇ ಅರ್ಥಾಂತರನ್ಯಾಸಾಲಂಕಾರ.

ಉದಾಹರಣೆ:-

1. ಗುಣಿಗಳ ಗೆಳೆತನದಿಂದ ಅಲ್ಪನಿಗೂ ಆಧಿಕ್ಯ ಬರುವುದು; ಹೂವಿನಿಂದ ನಾರೂ ಸ್ವರ್ಗ ಸೇರುವುದಿಲ್ಲವೇ?


ಉಪಮೇಯ: (ವಿಶೇಷ ವಾಕ್ಯ) ಗುಣಿಗಳ ಗೆಳೆತನದಿಂದ ಅಲ್ಪನೂ ಆಧಿಕ್ಯ ಹೊಂದುವುದು.

ಉಪಮಾನ: (ಸಾಮಾನ್ಯ ವಾಕ್ಯ) ಹೂಮಾಲೆಯ ಮೂಲಕ ನಾರು ಸ್ವರ್ಗ ಸೇರುವುದು.

ಇಲ್ಲಿ ವಿಶೇಷ ವಾಕ್ಯವನ್ನು ಸಾಮಾನ್ಯ ಸಂಗತಿಯಿಂದ ಸಮರ್ಥನೆ ಮಾಡಿರುವುದರಿಂದ ಇದು ಅರ್ಥಾಂತರನ್ಯಾಸಾಲಂಕಾರ.2. ಸತ್ಪುರುಷರು ಸಂಪತ್ತು ಬಂದಾಗ ಪರರ ಬಗೆಗೆ ಕರುಣಿಸುತ್ತಾರೆ. ಪರರಿಗುಪಕಾರ ಮಾಡುವುದು ಸತ್ಪುರುಷರ ಜನ್ಮ ಗುಣವಾಗಿರುತ್ತದೆ.


ಉಪಮೇಯ: (ವಿಶೇಷ ವಾಕ್ಯ) ಸತ್ಪುರುಷರು ಸಂಪತ್ತು ಬಂದಾಗ ಬೇರೆಯವರಿಗೆ ಕರುಣಿಸುವುದು.

ಉಪಮಾನ: (ಸಾಮಾನ್ಯ ವಾಕ್ಯ) ಪರರಿಗೆ ಉಪಕಾರ ಮಡುವುದು ಸತ್ಪುರುಷರ ಜನ್ಮಗುಣ.

ಸಮನ್ವಯ: ಇಲ್ಲಿ ವಿಶೇಷ ಸಂಗತಿಯನ್ನು ಸಾಮಾನ್ಯ ಸಂಗತಿಯಿಂದ ಸಮರ್ಥಿಸಿದೆ, ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.3.
ದೊರೆಯೊಳ್ ಸೆಣಸುಗೆ ತನ್ನಿಂ

ಪಿರಿಯರೊಳುರವಣಿಸಿ ಪೊಣರ್ದೊಡೆ ಅಳಿವುದು ದಿಟಮೀ |

ನರಪತಿಯೊಳ್ ಪೊಣರ್ದೊಡೆ ಅಳಿದರ್

ಪರಕಿಪೊಡಾ ಕೆಳದಿ ಮಧುರೆ ಬೇಡ ಮರಾಟರ್ ||


ಅರ್ಥ: ಸರಿಸಮಾನರಾದವರೊಡನೆ ಯುದ್ಧ ಮಾಡಬೇಕು, ತನಗಿಂತ ಬಲಿಷ್ಠರಾದವರೊಡನೆ ಯುದ್ಧ ಮಾಡಿದರೆ ಸಾವು ಖಚಿತ. ಮಹಾರಾಜ ಚಿಕ್ಕದೇವರಾಜ ಒಡೆಯರೊಡನೆ ಯುದ್ಧಮಾಡಿ ಕೆಳದಿಯವರು, ಮಧುರೆಯವರೂ, ಬೇಡರೂ, ಮರಾಠರು ಸತ್ತರು.


ಉಪಮೇಯ: (ವಿಶೇಷ ವಾಕ್ಯ) ಮಹಾರಾಜ ಚಿಕ್ಕದೇವರಾಜ ಒಡೆಯರೊಡನೆ ಯುದ್ಧಮಾಡಿ ಕೆಳದಿಯವರು, ಮಧುರೆಯವರೂ, ಬೇಡರೂ, ಮರಾಠರು ಸತ್ತರು.

ಉಪಮಾನ: (ಸಾಮಾನ್ಯ ವಾಕ್ಯ) ಸರಿಸಮಾನರಾದವರೊಡನೆ ಯುದ್ಧ ಮಾಡಬೇಕು, ತನಗಿಂತ ಬಲಿಷ್ಠರಾದವರೊಡನೆ ಯುದ್ಧ ಮಾಡಿದರೆ ಸಾವು ಖಚಿತ.

ಸಮನ್ವಯ: ಇಲ್ಲಿ ವಿಷೇಶ ಸಂಗತಿಯನ್ನು ಸಾಮಾನ್ಯ ಸಂಗತಿಯಿಂದ ಸಮರ್ಥಿಸಿದೆ, ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.4.
ಎನಗೆ ಹಿತಂ ಬ್ರಾಹ್ಮಣನೀ - |

ತನೆನ್ನದವಿವೇಕಿಯಾಗಿ ಶಿವಭೂತಿಗೆ ತೊ - |

ಟ್ಟನೆ ಬಗೆದನಹಿತಮಂ ತ |

ದ್ವನಚರಂ ಎಂತುಂ ಕೃತಘ್ನರೇನಂ ಮಾಡರ್? || - (ಪಂಚತಂತ್ರ)


ಅರ್ಥ: ತನಗೆ ಈ ಬ್ರಾಹ್ಮಣನು ಹಿತವನ್ನುಂಟು ಮಾಡಿದ್ದಾನೆ, ಎಂದು ಯೋಚಿಸದೆ ಆ ಬೇಡನು ಒಮ್ಮೆಲೆ ಅವನಿಗೆ ಕೇಡನ್ನು ಬಗೆದನು. ಕೃತಘ್ನರಾದವರು ಏನನ್ನು ತಾನೆ ಮಾಡುವುದಿಲ್ಲ?

ಉಪಮೇಯ: (ವಿಶೇಷ ವಾಕ್ಯ) ಎನಗೆ ಹಿತಂ ಬ್ರಾಹ್ಮಣನೀ....ದ್ವನಚರಂ

ಉಪಮಾನ: (ಸಾಮಾನ್ಯ ವಾಕ್ಯ) ಎಂತುಂ ಕೃತಘ್ನರೇನಂ ಮಾಡರ್?

ಸಮನ್ವಯ: ಇಲ್ಲಿ ವಿಷೇಶ ಸಂಗತಿಯನ್ನು ಸಾಮಾನ್ಯ ಸಂಗತಿಯಿಂದ ಸಮರ್ಥಿಸಿದೆ, ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.


ಇತರೆ ಉದಾಹರಣೆಗಳು:-

 • ಆತ ಉಂಡ ಮನೆಗೆ ಕೇಡು ಬಗೆದ, ಕೃತಘ್ನರು ಏನನ್ನು ತಾನೆ ಮಾಡರು.
 • ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತುಂ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂನರಂ. ಪಲವು ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನ ಸೋಮೇಶ್ವರಾ.
 • "ಕೋಪಾನಳನುಳುರೆ ಮಹಾ
  ಕೂಪದೊಳಿಭವೈರಿ ಪಾಯ್ದ ಸತ್ತುದು ಘನಶೌ
  ರ್ಯೋಪೇತನಾದೊಡಂ ಸಲೆ
  ಕೋಪಾತುರನಪ್ಪನಾವನುಂ ಬೞದಿಪನೇ"
 • ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ. ಭಕ್ತನಾದ ಪ್ರಹ್ಲಾದನು ತಂದೆಯಿಂದ ಗಂಡಾಂತರಕ್ಕೊಳಗಾದಾಗ ಪರಮಾತ್ಮನು ಕಾಪಾಡಲಿಲ್ಲವೆ.


5. ಶ್ಲೇಷಾಲಂಕಾರ:

ಶ್ಲೇಷೆ ಎಂದರೆ ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಪದಶಕ್ತಿ, ಅನೇಕ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ಉಪಮಾನ ಹಾಗೂ ಉಪಮೇಯಗಳಿಗೆ ಬೇರೆ ಬೇರೆ ಅರ್ಥ ಕೊಡುವಂತೆ ವರ್ಣಿಸಲ್ಪಟ್ಟರೆ ಅದು ಶ್ಲೇಷಾಲಂಕಾರವೆನಿಸುವುದು.

ಉದಾಹರಣೆಗಳು:-

1. "ಆ ವಿವಾಹ ಮಂಟಪ ಪುರಂದರ ಪುರದಂತೆ ಸದಾ ರಂಭಾನ್ವಿತ ವಿಬುಧ ಮಿಳಿತವಾಗಿತ್ತು."


ರಂಬಾನ್ವಿತ = ಬಾಳೆಯ ಗಿಡಗಳಿಂದ ಕೂಡಿತ್ತು, ರಂಭೆಯೆಂಬ ಅಪ್ಸರೆಯಿಂದ ಕೂಡಿತ್ತು

ವಿಬುಧ ಮಿಳಿತ = ಬ್ರಾಹ್ಮಣರಿಂದ ಕೂಡಿತ್ತು, ದೇವತೆಗಳಿಂದ ಕೂಡಿತ್ತು


ಈ ಅಲಂಕಾರ ವಾಕ್ಯದಲ್ಲಿ ವಿವಾಹ ಮಂಟಪವೊಂದರ ವರ್ಣನೆ ಮಾಡಲಾಗಿದೆ. ಪುರಂದರ ಪುರವೆಂದರೆ ದೇವೆಂದ್ರನ ಪಟ್ಟಣ ಅಂದರೆ ಸ್ವರ್ಗ, ರಂಭಾವಿನ್ವಿತ ಮತ್ತು ವಿಬುಧ ಮಿಳಿತ ಎರಡು ಪದಗಳು ಉಪಮೇಯ ಉಪಮಾನಗಳಿಗೆ ಬೇರೆ ಬೇರೆ ಅರ್ಥ ನೀಡುತ್ತವೆ.

ರಂಭಾನ್ವಿತ - ಎಂಬ ಪದವು ವಿವಾಹ ಮಂಟಪದ ಪರವಾಗಿ ಬಾಳೆಯ ಗಿಡಗಳಿಂದ ಕೂಡಿತ್ತು ಎಂಬ ಅರ್ಥವನ್ನು ಸ್ವರ್ಗದ ಪರವಾಗಿ ರಂಭೆಯೆಂಬ ಅಪ್ಸರೆಯಿಂದ ಕೂಡಿತ್ತು ಎಂಬರ್ಥವನ್ನೂ ಕೊಡುತ್ತದೆ.

ವಿಬುಧಮಿಳಿತ ಎಂಬ ಪದವು ವಿವಾಹ ಮಂಟಪದ ಪರವಾಗಿ ಬ್ರಾಹ್ಮಣರಿಂದ ಕೂಡಿತ್ತು ಎಂಬರ್ಥವನ್ನು ಹಾಗೆಯೇ ಸ್ವರ್ಗದ ಪರವಾಗಿ ದೇವತೆಗಳಿಂದ ಕೂಡಿತ್ತು ಎಂಬರ್ಥವನ್ನೂ ನೀಡುತ್ತದೆ.2.
"ಪಂಕಜಮುಂ ಸುಹೃದ್ವದನ ಪಂಕಜಮುಂ ಮುಗಿವನ್ನಂ ಉಗ್ರತೇ

ಜಂ ಕಿಡುತಿರ್ಪಿನಂ ನಿಜಕರಂಗಳನಂದುಡುಗುತ್ತ ಮಿರ್ಪ ಚ

ಕ್ರಾಂಕಮಗಲ್ವಿನಂ ಕ್ರಮದಿನಂಬರಮಂ ಬಿಸುಟುರ್ವಿ ಗಂಧಾಕಾ

ರಂ ಕವಿತರ್ಪಿನಂ ಕುರುಕುಲಾರ್ಕನು ಮರ್ಕನುಮಸ್ತಮೆಯ್ದಿದರ್ || - ರನ್ನನ ಗದಾಯುದ್ಧ


ಚಕ್ರಾಂಕ = ಚಕ್ರವಾಕ ಪಕ್ಷಿ, ಚಕ್ರವರ್ತಿ ಬಿರುದು

ಅಂಬರ = ಆಕಾಶ, ಬಟ್ಟೆ

ಅಂಧಕಾರ = ಕತ್ತಲೆ, ದುಃಖವೆಂಬ ಕತ್ತಲೆ


ಇಲ್ಲಿ ಒಂದೇ ಪದ್ಯದಲ್ಲಿ ಸುರ್ಯಾಸ್ತವನ್ನೂ ಮತ್ತು ದುರ್ಯೋಧನನ ಅವಸಾನಗಳೆರಡನ್ನೂ ಹೇಳಲಾಗಿದೆ. ಸೂರ್ಯನ ಮುಳುಕುವಿಕೆಯಿಂದ ಆತನ ಪ್ರಖರ ಕಿರಣಗಳು ತೇಜವನ್ನು ಕಳೆದುಕೊಳ್ಳುತ್ತಿರಲು ಸರೋವರದ ಕಮಲಗಳು ಮುದುಡಿ ಹೋದವು. ಚಕ್ರವಾಕ ಪಕ್ಷಿಗಳು ಪರಸ್ಪರ ಅಗಲಿದವು. ಭೂಮಿಗೆ ಅಂಧಕಾರ ಕವಿಯಿತು ಎಂದು ಹೇಳಿದರೆ, ದುರ್ಯೋಧನನ ಪರವಾಗಿ ಕುರುಕುಲ ಸೂರ್ಯನಾದ ದುರ್ಯೋಧನ ಅವಸಾನ ಹೊಂದುವ ಸಮಯದಲ್ಲಿ ತನ್ನ ಮುಖದ ತೇಜಸ್ಸನ್ನು ಕಳೆದುಕೊಂಡು ಮುಖ ಕಳೆಗಟ್ಟಿತು, ಕುರುಕುಲಕ್ಕೆ ಕತ್ತಲೆ ಕವಿಯುವಂತೆ ದುರ್ಯೋಧನ ಅವಸಾನ ಹೊಂದಿದ. ಹೀಗೆ ಉಪಮಾನದ ಪರವಾಗಿ ಹಾಗೂ ಉಪಮೇಯದ ಪರವಾಗಿ ಎರಡೆರಡು ಅರ್ಥಗಳನ್ನು ಕೊಡುವಂತೆ ಮಾಡುವುದೇ ಶ್ಲೇಷಾಲಂಕಾರ.3.
"ಕಲಿಯಂತೆ ಸಶರಂ ಅಂಬರ |

ತಲದಂತೆ ಸಹಂಸಂ ಅಮರಪುರಮೆನೆಸುಮನೋ |

ನಿಲಯಂ ಸಕವಿ ನೃಪಸಭಾ |

ತಲದಂತೆ ಅಹಿಯಂತೆ ಸವಿಷಮೊಪ್ಪಿದುದು ಸರಂ ||"


ಸಶರ = ನೀರಿನಿಂದ ಕೂಡಿದ ಸರೋವರ, ಬಾಣಗಳನ್ನು ಹೊಂದಿದ ವೀರ

ಸಹಂಸ = ಹಂಸಪಕ್ಷಿಯಿಂದ ಕೂಡಿದ, ಸೂರ್ಯನನ್ನು ಹೊಂದಿದ

ಸುಮನೋನಿಲಯ = ತಾವರೆ ಹೂಗಳ ವಾಸಸ್ಥಾನ, ದೇವತೆಗಳ ವಾಸಸ್ಥಾನ

ಸುಕವಿ = ನೀರುಹಕ್ಕಿಗಳಿಂದ ಕೂಡಿದ, ಕವಿಗಳಿಂದ ಕೂಡಿದ

ಸವಿಷ = ಸರೋವರದಲ್ಲಿನ ನೀರು, ಹಾವಿನಲ್ಲಿರುವ ವಿಷ


ಇಲ್ಲಿ ಒಂದು ಸರೋವರವನ್ನು ವರ್ಣಿಸಲಾಗಿದೆ. ಸಶರ, ಸಹಂಸ, ಸುಮನೋನಿಲಯ, ಸಕವಿ, ಸವಿಷ, ಈ ಐದು ಪದಗಳು ಸರೋವರವನ್ನು ನೇರವಾಗಿ ವರ್ಣಿಸುವಂತಿದ್ದರೂ ಮತ್ತೊಂದು ಅರ್ಥದಲ್ಲಿ ವೀರನಿಗೆ, ಆಕಾಶಕ್ಕೆ, ಅಮರಪುರಿಗೆ, ಕವಿಗಳಿಗೆ ಮತ್ತು ಹಾವಿಗೆ ಹೋಲಿಸಲಾಗಿದೆ. ಒಂದೇ ಪದಕ್ಕೆ ಇರುವ ಎರಡು ಅರ್ಥಗಳನ್ನು ಉಪಮಾನ ಮತ್ತು ಉಪಮೇಯಗಳೊಂದಿಗೆ ಬಳಸಿರುವುದರಿಂದ ಇದು ಶ್ಲೇಷಾಲಂಕಾರ.6. ಉತ್ಪ್ರೇಕ್ಷಾಲಂಕಾರ:-

ಒಂದು ವಸ್ತುವನ್ನೋ ಅಥವಾ ಸನ್ನಿವೇಶವನ್ನೋ ಅದಕ್ಕೆ ಸಮಾನವಾದ ಗುಣಧರ್ಮವುಳ್ಳ ಮತ್ತೊಂದು ವಸ್ತುವೆಂದು, ಸನ್ನಿವೇಶವೆಂದು ಕಲ್ಪಿಸಿ ವರ್ಣಿಸುವುದು ಉತ್ಪ್ರೇಕ್ಷಾಲಂಕಾರವೆನಿಸುವುದು. (ಒಂದು ವಸ್ತುವನ್ನು ಮತ್ತೊಂದುದನ್ನಾಗಿ ಕಲ್ಪಿಸಿ ಅಥವಾ ಊಹಿಸಿ ವರ್ಣಿಸುವುದೇ ಉತ್ಪ್ರೇಕ್ಷಾಲಂಕಾರ).

ಉದಾಹರಣೆಗಳು:-

1. "ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಈ ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹೂಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು."


ಇಲ್ಲಿ ಯುದ್ಧದಲ್ಲಿ ಸತ್ತು ಬಿದ್ದ ಆನೆಗಳನ್ನು ಚಿಕ್ಕ ಚಿಕ್ಕ ಬೆಟ್ಟಗಳಂತೆ, ರಕ್ತವನ್ನು ರಕ್ತಸಮುದ್ರದಂತೆ ಕಲ್ಪಿಸಿ ವರ್ಣಿಸಲಾಗಿದೆ. ಇಲ್ಲಿ ಒಂದು ವಸ್ತು ಸ್ಥಿತಿಯನ್ನು ಮತ್ತೊಂದಾಗಿ ತುಸು ಅತಿಯಾಗಿ ಕಲ್ಪಿಸಿ ಹೇಳಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರ.2.
"ಆ ಸೇನಾ ರಜದಿಂ ಪರಿ

ದೂಸರ ಮಾದುದು ನಿಜಾಂಗಮಂ ತೊಳೆಯಲ್ಕೆಂ

ದೋಸರಿಸದೆ ಪೊಕ್ಕಂತಿರೆ

ವಾಸರಕರಪರವಾರಿನಿಧಿಯೊಳ್ ಪೊಕ್ಕಂ"


ಅರ್ಥ: ಸೇನೆಯ ಕಾಲ್ತುಳಿತದಿಂದ ಉಂಟಾದ ಕೆಂಪು ಧೂಳಿನಿಂದ ಆವರಿಸಲ್ಪಟ್ಟ ತನ್ನ ದೇಹವನ್ನು ತೊಳೆಯಲು ಸೂರ್ಯನು ಪಶ್ಚಿಮ ಸಮುದ್ರವನ್ನು ಹೊಕ್ಕನು.


ಇಲ್ಲಿ ಸಹಜವಾಗಿ ಮುಳುಗಿದ ಸೂರ್ಯನನ್ನು ಯುದ್ಧದಿಂದಾಗಿ ಸೇನೆಯ ಕಾಲ್ತುಳಿತದ ಧೂಳಿನಿಂದ ಕೊಳೆಯಾದ ತನ್ನ ಕೆಂಪು ಮೈಯನ್ನು ತೊಳೆದುಕೊಳ್ಳಲೆಂದು ಸಮುದ್ರದಲ್ಲಿ ಮುಳುಗಿದನೆಂದು ಕವಿಯು ಉತ್ಪ್ರೇಕ್ಷೆ ಮಾಡಿ ಹೇಳಿದ್ದಾನೆ. ಹಾಗಾಗಿ ಇದು ಉತ್ಪ್ರೇಕ್ಷಾಲಂಕಾರ.3.
"ಅನ್ನೆಗಂ ಪಶ್ಚಿಮಾಂಗನೆ ಪಿಡಿದ ರನ್ನದಿಮ್ಮೈಗನ್ನಡಿಯೋ?

ವಾರುಣಿಯ ಮಸ್ತಕೋನ್ನತ ನವೀನ ಮಾಣಿಕ್ಯವೋ?

ವಡಬಾಗ್ನಿಯಿಂ ಸಿಡಿದ ಪೆರ್ಗಿಡಿಯಿದೋ...?"


ಇಲ್ಲಿ ಮುಳುಗುತ್ತಿರುವ ಕೆಂಪು ಸೂರ್ಯನನ್ನು, ಪಶ್ಚಿಮದ ಸುಂದರಿ ತನ್ನ ಸೌಂದರ್ಯವನ್ನು ನೋಡಿಕೊಳ್ಳಲು ಹಿಡಿದುಕೊಂಡಿರುವ ರತ್ನದ ಎರಡು ಮುಖಗಳ ಕನ್ನಡಿಯೋ, ವಾರುಣಿಯ (ವರುಣನ ಹೆಂಡತಿ) ಕಿರೀಟದ ಹೊಸ್ ಮಾಣಿಕ್ಯವೋ? ಸಮುದ್ರದ ಅಲೆಗಳ ಘರ್ಷಣೆಯಿಂದುಂಟಾದ ಕಿಚ್ಚಿನ ದೊಡ್ಡಾದಾದ ಕಿಡಿಯೋ ಎಂಬುದಾಗಿ ಉತ್ಪ್ರೇಕ್ಷೆ ಮಾಡಿ ವರ್ಣಿಸಲಾಗಿದೆ.

ಇಲ್ಲಿ ಒಂದು ವಸ್ತುಸ್ಥಿತಿಯನ್ನು ಮತ್ತೊಂದಾಗಿ ಊಹಿಸಿಕೊಂಡು ಹೇಳಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರ.3.
ಪಾಲ್ದುಂಬಿದ ಸಾಲ್ದೆನೆಗಳ

ನೆಲ್ದುರುಗಲನೊಲ್ದು ಸೀಳಿಗಿಳಿಭಯ ಭರದಿಂ ||

ಜೋಲ್ದಿಳೆಗಿಳಿವಂತಿರಬಂ

ಬಲ್ ದೆರೆಯೊಳ್ ಪೊಳೆದು ಮಡಿಯ ನೀರೋಳ್ ತೋರ್ಕುಂ || --- ರಾಜಶೇಖರ ವಿಳಾಸ


ಗದ್ದೆಯಲ್ಲಿ ನೀರಿದೆ. ಆ ನೀರಿನಲ್ಲಿ ಬತ್ತದ ತೆನೆಗಳ ಪ್ರತಿಬಿಂಬ ಕಾಣುತ್ತಿದೆ

ಅರ್ಥ: ಹಾಲುತುಂಬಿದ ಸಾಲುಸಾಲಾಗಿ ಕಾಣುವ ಬತ್ತದ ತೆನೆಗಳು ತಮ್ಮನ್ನು ಗಿಳಿಗಳು ಬಂದು ಸೀಳಿಬಿಡುತ್ತವೆಂಬ ಭಯದಿಂದ ಭೂಮಿಗೆ ಇಳಿದುಹೋದವೋ ಎಂಬಂತೆ ಗದ್ದೆಯ ನೀರಿನಲ್ಲಿ ಅವು ಪ್ರತಿಫಲಿಸಿ ಕಾಣುತ್ತಿದೆ.

ಇಲ್ಲಿ ಸಹಜವಾಗಿ ನಿರಿನಲ್ಲಿ ಪ್ರತಿಫಲಿಸಿ ಕಾಣುವ ಬತ್ತದ ತೆನೆಗಳ ಆ ಸನ್ನಿವೇಶವನ್ನು ಕವಿಯು ಬೇರೊಂದು ಕಾರಣ ಕೊಟ್ಟು ಕಲ್ಪಿಸಿ ಗಿಳಿಗಳ ಭಯದಿಂದ ಅವು ಭೂಮಿಗೆ ಇಳಿದು ಹೊಗಿವೆ ಎಂದು ಸಂಭಾವನೆ ಮಾಡಿ ಹೇಳುವ ಇದು ಉತ್ಪ್ರೇಕ್ಷಾಲಂಕಾರವಾಗುವುದು.ಸಾರಾಂಶ

 • ಪದಗಳ, ಅರ್ಥಗಳ ಚಮತ್ಕಾರಗಳಿಂದ ಕಾವ್ಯ ಅಥವಾ ಮಾತಿನ ಸೌಂದರ್ಯವನ್ನು ಹೆಚ್ಚಿಸುವುದನ್ನು ಅರ್ಥಾಲಂಕಾರವೆನ್ನುವರು.
 • ಎರಡು ವಸ್ತುಗಳಲ್ಲಿನ ಪರಸ್ಪರ ಸಾದೃಶ್ಯ ಸಂಪತ್ತನ್ನು ಹೇಳುವುದೇ ಉಪಮಾಲಂಕಾರವೆನಿಸುತ್ತದೆ.
 • ಉಪಮಾಲಂಕಾರದಲ್ಲಿ ಎರಡು ಪ್ರಭೇದಗಳಿವೆ. ಉಪಮಾನ, ಉಪಮೇಯ ಉಪಮಾವಾಚಕ ಪದ, ಸಮಾನಧರ್ಮ ಈ ನಾಲ್ಕು ಅಂಶಗಳನ್ನು ಒಳಗೊಂಡಿರುವ ಅಲಂಕಾರವೇ ಪೂರ್ಣೋಪಮಾಲಂಕಾರ. ಇವುಗಳಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿ ಹೇಳಲ್ಪಡದೇ ಇರುವುದು ಲುಪ್ತೋಪಮಾಲಂಕಾರ
 • ಉಪಮೇಯ ಮತ್ತು ಉಪಮಾನಗಳು ಎರಡೂ ಒಂದೇ ಎಂದು ಅಭೇದವನ್ನು ಕಲ್ಪಿಸಿ ಹೇಳುವುದೇ ರೂಪಕಾಲಂಕಾರ.
 • ಉಪಮಾನ, ಉಪಮೇಯಗಳಾದ ಎರಡು ಬೇರೆ ಬೇರೆ ವಾಕ್ಯಗಳ ಅರ್ಥ ಪರಸ್ಪರ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು
 • ಒಂದು ವಿಶೇಷ ವಾಕ್ಯವನ್ನು, ಲೋಕ ಪ್ರಸಿದ್ಧವಾದ ಗಾದೆ, ನೀತಿ ವಾಕ್ಯ ಮುಂತಾದ ರೂಢಿಯಲ್ಲಿನ ಸಾಮಾನ್ಯ ವಾಕ್ಯಗಳಿಂದ ಸಮರ್ಥಿಸುವುದೇ ಅರ್ಥಾಂತರನ್ಯಾಸಾಲಂಕಾರ
 • ಅನೇಕ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ಉಪಮಾನ ಹಾಗೂ ಉಪಮೇಯಗಳಿಗೆ ಬೇರೆ ಬೇರೆ ಅರ್ಥ ಕೊಡುವಂತೆ ವರ್ಣಿಸಲ್ಪಟ್ಟರೆ ಅದು ಶ್ಲೇಷಾಲಂಕಾರವೆನಿಸುವುದು.
 • ಒಂದು ವಸ್ತುವನ್ನು ಮತ್ತೊಂದುದನ್ನಾಗಿ ಕಲ್ಪಿಸಿ ಅಥವಾ ಊಹಿಸಿ ವರ್ಣಿಸುವುದೇ ಉತ್ಪ್ರೇಕ್ಷಾಲಂಕಾರ.