ಹಲ್ಲುಕಡಿಯುವ ಸಮಸ್ಯೆ ಅಥವಾ ಬ್ರಕ್ಸಿಸಂ

Bruxism

ನಮ್ಮ ದೇಹಕ್ಕೆ ವಯಸ್ಸಾದಂತೆಲ್ಲಾ ನಮ್ಮ ಹಲ್ಲುಗಳು ಸವೆಯುತ್ತಾ ಹೋಗುವುದು ಸಹಜ. ಆದರೆ ಕೆಲವರಲ್ಲಿ ಈ ಸವೆತ ಹೆಚ್ಚಾಗಿರುವುದು ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಹಲ್ಲುಕಡಿಯುವ ಸಮಸ್ಯೆ ಅಥವಾ ಬ್ರಕ್ಸಿಸಂ(Bruxsim). ಹಲ್ಲುಕಡಿಕೆ ಒಂದು ಸಮಸ್ಯೆ, ಖಾಯಿಲೆಯಲ್ಲ.

ಇಂಗ್ಲೀಷ್ ಭಾಷೆಯಲ್ಲಿ 'ಬ್ರಕ್ಸ್'(Brux) ಎಂದರೆ ಹಲ್ಲುಕಡಿಯುವುದು ಅಥವಾ ಹಲ್ಲುಕಚ್ಚುವುದು ಎಂದರ್ಥ. ಇದರಿಂದ ಉಂಟಾಗುವ ಸಮಸ್ಯೆಯನ್ನು ಬ್ರಕ್ಸಿಸಂ(Bruxism) ಎನ್ನುತ್ತಾರೆ

ಇದರಲ್ಲಿ ಎರಡು ವಿಧ. ಎಚ್ಚರವಾಗಿದ್ದು ತಮಗರಿವಿಲ್ಲದಂತೆ ಹಲ್ಲು ಕಚ್ಚುವುದು ಅಥವಾ ಹಲ್ಲುಕಡಿಯುವುದನ್ನು ಜಾಗೃತ ಹಲ್ಲುಕಡಿಕೆ(Awake Bruxism) ಎನ್ನುತ್ತಾರೆ. ನಿದ್ರೆಯಲ್ಲಿ ಅಥವಾ ಅರೆ ಪ್ರಜ್ಞಾವಸ್ಥೆಯಲ್ಲಿ ಹಲ್ಲುಕಡಿಯುವುದನ್ನು ನಿದ್ರಾ ಹಲ್ಲು-ಕಡಿಕೆ (Nocturnal Bruxism

ಗುಣಲಕ್ಷಣಗಳು

ನಿದ್ರಾ ಹಲ್ಲುಕಡಿಕೆ ಸಮಸ್ಯೆಯನ್ನು ಗುರುತಿಸುವುದು ಕಷ್ಟಕರವಾದ್ದರಿಂದ, ಸಮಸ್ಯೆಯ ಗುಣಲಕ್ಷಣಗಳನ್ನು ತಿಳಿಯುವುದು ಬಹಳ ಮುಖ್ಯ.

  • ಹಲ್ಲುಗಳು ಬಹಳವಾಗಿ ಸವೆದಿರುವುದು, ಹಲ್ಲಿನ ಮೇಲ್ಪದರ ಹಾಳಾಗಿತುವುದು.
  • ಹಲ್ಲುಗಳು ಸಮತಟ್ಟಾಗಿರುವುದು.
  • ಹಲ್ಲು ಮತ್ತು ವಸಡಿನಲ್ಲಿ ನೋವು.
  • ಹಲ್ಲಿನ ಸಂವೇದನಾಶೀಲತೆ ಹೆಚ್ಚಾಗುವುದು. ಇದರಿಂದ ಬಿಸಿಯಾದ ಅಥವಾ ಅತಿ ತಣ್ಣಗಿನ ಪದಾರ್ಥಗಳನ್ನು ತಿನ್ನುವಾಗ ನೋವು ಕಾಣಿಸಿಕೊಳ್ಳುವುದು.
  • ದವಡೆಯ ಆಯಾಸ ಅಥವಾ ಮುಖದ ಸ್ನಾಯು ಬಿಗಿಗೊಳ್ಳುವಿಕೆ, ಇದರಿಂದ ದವಡೆ ಪೂರ್ಣವಾಗಿ ತೆರೆಯಲು ಸಾಧ್ಯವಾಗದೆ ಇರುವುದು.
  • ಕಿವಿ ಬಳಿ ನೊವು ಕಾಣಿಸಿಕೊಳ್ಳುವುದು, ಆದರೆ ಕಿವಿಯಲ್ಲಿ ಏನೂ ತೊಂದರೆ ಇಲ್ಲದಿರುವುದು.
  • ಆಗಾಗ ಸಣ್ಣ ತಲೆನೋವು ಕಾಣಿಸಿಕೊಳ್ಳುವುದು.
  • ನಿದ್ರಾ ಅಡಚಣೆ ಅಥವಾ ಪೂರ್ಣ ನಿದ್ರೆ ಇಲ್ಲದಿರುವುದು.

ಕಾರಣಗಳು

ವೈದ್ಯಲೋಕದಲ್ಲಿ ಹಲ್ಲುಕಡಿಕೆ ಸಮಸ್ಯೆಗೆ ಸಂಪೂರ್ಣವಾಗಿ ಸರಿಯಾದ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಆದರೆ ಇದು ದೈಹಿಕ, ಮಾನಸಿಕ ಮತ್ತು ಅನುವಂಶೀಯ ಕಾರಣಗಳ ಸಂಯೋಜನೆಯ ಪರಿಣಾಮವಿರಬಹುದೆಂದು ಹೇಳಲಾಗಿದೆ.

ಕೆಳಗಿನ ಕಾರಣಗಳು ಹಲ್ಲುಕಡಿಕೆಯ ಸಮಸ್ಯೆಯನ್ನು ಹೆಚ್ಚಾಗಿಸುತ್ತದೆ.

  • ಮಾನಸಿಕ ಒತ್ತಡ: ಹೆಚ್ಚಾದ ತಳಮಳ, ಆತಂಕ, ಭಯ, ಸಿಟ್ಟು, ಹತಾಶೆ ಹಲ್ಲುಕಡಿಕೆಯ ಸಮಸ್ಯೆಗೆ ಕಾರಣವಾಗುತ್ತದೆ.
  • ಪ್ರಾಯ: ಸಣ್ಣ ಮಕ್ಕಳಲ್ಲಿ ಹಲ್ಲುಕಡಿಕೆ ಸಮಸ್ಯೆ ಕಾಣಿಸಿಕೊಂಡರು, ವಯಸ್ಸಾದಂತೆಲ್ಲಾ ಇದು ಕ್ರಮೇಣ ಇದು ಕಾಣೆಯಾಗುತ್ತದೆ.
  • ಔಷಧ ಸೇವನೆ: ಕೆಲವು ಮಾನಸಿಕ ಖಾಯಿಲೆಗಳಿಗೆ ಸಂಬಂಧಿಸಿದ ಔಷಧಗಳ ಸೇವನೆಯಿಂದ ಹಲ್ಲುಕಡಿತ ಸಮಸ್ಯೆ ಉಂಟಾಗಬಹುದು.
  • ವ್ಯಸನಗಳು: ಮಾದಕ ವಸ್ತುಗಳ ಸೇವನೆ, ತಂಬಾಕುಯುಕ್ತ ಧೂಮಪಾನ, ಮ ಸೇವನೆ, ಅತಿಯಾದ ಕಾಫಿಯುಕ್ತ ಪಾನೀಯಗಳ ಸೇವನೆ ಹಲ್ಲುಕಡಿಕೆ ಸಮಸ್ಯೆಯನ್ನು ಹೆಚ್ಚಾಗಿಸುತ್ತದೆ.
  • ಮಾನಸಿಕ ಅಸ್ವಸ್ಥತೆ: ಕೆಲವು ಮಾನಸಿಕ ಖಾಯಿಲೆಗಳು ಹಲ್ಲುಕಡಿಕೆ ಸಮಸ್ಯೆಗೆ ಕಾರಣವಾಗುತ್ತವೆ. ಉದಾಹರಣೆಗೆ ಪಾರ್ಕಿನ್ಸನ್ ಖಾಯಿಲೆ (Parkinson's desease), ಬುದ್ಧಿಮಾಂದ್ಯತೆ(Dementia), ಅಪಸ್ಮಾರ(Epilepsy), ನಿದ್ರಾಹೀನತೆಗೆ ಸಂಬಂಧಿಸಿದ ಖಾಯಿಲೆ ಇರುವವರಲ್ಲಿ ಹಲ್ಲುಕಡಿಕೆ ಸಮಸ್ಯೆಯನ್ನು ಕಾಣಬಹುದಾಗಿದೆ.

ಪರಿಣಾಮಗಳು

ಬಹುತೇಕರಲ್ಲಿ ಹಲ್ಲುಕಡಿಯುವಿಕೆ ಸಮಸ್ಯೆ ಹೆಚ್ಚು ತೊಂದರೆ ನೀಡದು. ಆದರೆ ಬಹಳಕಾಲದ ಅಥವಾ ಅತಿಯಾದ ಹಲ್ಲುಕಡಿಯುವಿಕೆಯ ಸಮಸ್ಯೆಯು:

  • ಹಲ್ಲು ಹಾಗೂ ವಸಡುಗಳಿಗೆ ಗಂಭೀರವಾದ ಗಾಯವನ್ನು ಉಂಟುಮಾಡುತ್ತದೆ.
  • ಅತಿಯಾದ ತಲೆ ನೋವಿಗೆ ಕಾರಣವಾಗುತ್ತದೆ.
  • ತೀವ್ರವಾದ ಮುಖದ ಸ್ನಾಯು ಹಾಗೂ ದವಡೆ ನೋವಿಗೆ ಕಾರಣವಾಗುತ್ತದೆ.

ತಡೆಗಟ್ಟುವ ವಿಧಾನಗಳು

ಮಲಗುವ ಮುನ್ನ ಹಲ್ಲು ರಕ್ಷಕ ಅಥವಾ 'ಡೆಂಟಲ್ ಗಾರ್ಡ್' (Dental Guard or Occlusal splints) ಗಳನ್ನು ತೊಡುವುದರಿಂದ ಸ್ವಲ್ಪ ಮಟ್ಟಿಗೆ ನಿದ್ರಾ ಹಲ್ಲುಕಡಿಕೆ ಸಮಸ್ಯೆಯನ್ನು ನಿಯಂತ್ರಿಸಬಹುದು.

ಅನಾರೋಗ್ಯಕರ ವ್ಯಸನಗಳನ್ನು ಬಿಡುವುದು ಸಮಸ್ಯೆಯನ್ನು ನಿಯಂತ್ರಿಸುವುದರಲ್ಲಿ ಸಹಾಯಕಾರಿಯಾಗುತ್ತದೆ.

ಮನಸ್ಸನ್ನು ಹೆಚ್ಚು ಸ್ಥಿರವಾಗಿಟ್ಟುಕೊಂಡು, ಮಾನಸಿಕ ಒತ್ತಡಗಳು, ಉದ್ವೇಗ, ತಳಮಳ, ಹತಾಶೆಗಳನ್ನು ತಡೆಗಟ್ಟುವುದರಿಂದ ಹಲ್ಲುಕಡಿಕೆ ಸಮಸ್ಯೆಯನ್ನು ತಡೆಗಟ್ಟಬಹುದು.

ತತ್ಸಮಾನ ಜ್ಞಾನ ಪುಟಗಳು

}