ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ

ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ

ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು,

ಬೇಟೆಗಾರನ ಬಿಲ್ಲಿನಂತಿರುವೆ ನೀನು

ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು

ಪಾರಿವಾಳದ ಕಣ್ಗೆ ನೆರಳನಿತ್ತಿಹುದು

ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು,

ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು

ತುಂಬು ಹರೆಯದ ಹುಡುಗಿ ನೀನೊಲುಮೆಗೀಡು,

ನಂಬಿ ನನ್ನನು ಬರಿಸಿ ಸಂತಸದಿ ಬಾಳು

ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ,

ಶಮವೆಲ್ಲ ಹೊನ್ನಹುದು ವರ್ಷದಂತ್ಯದಲಿ

ನಿನ್ನ ಹೊಟ್ಟೆಯ ತುಂಬ ಅನ್ನ ನೊರೆಹಾಲು

ನನ್ನ ನುಡಿಯನು ಕೇಳು, ನನ್ನೊಡನೆ ಬಾಳು

ನಿನ್ನೊಲುಮೆ ತಾರೆಗಳ ಹದಡಿರುವ ಬಾನು

ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ

ಪ್ರೀತಿಯೊಡನೆ ನಿನ್ನ ಕೇಳುವುದು ನಾನು,

ಮುಂದೆ ಹೋಗೆನ್ನದಿರು ನನ್ನ ಮನದರಸಿ

ಪ್ರೀತಿಭಾವಗೀತೆಮದುವೆಪ್ರಣಯ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail