ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ.
ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ 'ನಾಕುತಂತಿ' ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಪ್ರಶಸ್ತಿ ಪುರಸ್ಕೃತ ಕೃತಿ 'ನಾಕುತಂತಿ' ನಲವತ್ತು ನಾಲ್ಕು ಕವನಗಳ ಒಂದು ಪುಟ್ಟ ಸಂಕಲನ ಗ್ರಂಥ. ಇದು ಆತ್ಮ-ಆಧ್ಯಾತ್ಮ, ಲೌಕಿಕ-ಪಾರಮಾರ್ಥ, ವ್ಯಕ್ತಿ-ಶಕ್ತಿ, ಕೃಷಿ-ರಾಜಕೀಯ, ಭಕ್ತಿ-ಬೋಧೆ, ಶ್ರವಣ-ಅಂತಃಕರಣ - ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ.