ಬಿ. ಎಂ. ಶ್ರೀಕಂಠಯ್ಯ

BMShri

'ಕನ್ನಡ ನವೋದಯದ ಕಾರ್ಯ ಪ್ರವರ್ತಕ', 'ಕನ್ನಡದ ಕಣ್ವ', 'ಕರ್ನಾಟಕದ ಆಚಾರ್ಯ ಪುರುಷ' ಎಂದು ಖ್ಯಾತನಾಮರಾದ ಬಿ.ಎಂ.ಶ್ರೀ. (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) ಅವರು ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಡುವುದರ ಮೂಲಕ ಹೊಸಗನ್ನಡ ಸಾಹಿತ್ಯವನ್ನು ಸೃಷ್ಟಿಸಿದವರು.

ಹತ್ತೊಂಬತ್ತನೆಯ ಶತಮಾನದಿದಂದ ಕನ್ನಡ ಸಾಹಿತ್ಯ ರಚನೆಯಲ್ಲಿ ಜಡಗಟ್ಟಿ ಅರ್ಥಹೀನವಾಗಿದ್ದ, ಸಾಂಪ್ರದಾಯಿಕ ಲಕ್ಷಣಗಳಿಗೆ ಕಟ್ಟುವಿದ್ದು ಶುಷ್ಕವಾಗಿದ್ದ ಸಂದರ್ಭದಲ್ಲಿ, ಶ್ರೀಯವರು ಬರೆದ 'ಇಂಗ್ಲೀಷ್ ಗೀತಗಳು' ಕೃತಿ ಕನ್ನಡದ ನವೋದಯ ಕಾವ್ಯ ಯುಗಕ್ಕೆ ನಾಂದಿ ಹಾಡಿತು. ಅವರು 1915 ರಿಂದ ಬಿಡಿ ಬಿಡಿಯಾಗಿ ಬರೆದುಕೊಂಡು ಬಂದಿದ್ದ ಅನುವಾದಿತ ಮತ್ತು ಸ್ವತಂತ್ರ ಕವನಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮೊತ್ತ ಮೊದಲು 'ಶ್ರೀ' ಎಂಬ ಕಾವ್ಯನಾಮದೊದಂದಿಗೆ 1926ರಲ್ಲಿ ಪ್ರಕಟಿಸಿತು.

'ಇಂಗ್ಲೀಷ್ ಗೀತಗಳು' ಸಂಕಲನದಲ್ಲಿ ಒಟ್ಟು ಅರವತ್ತಮೂರು ಕವನಗಳಿವೆ. ಇವುಗಳಲ್ಲಿ 'ಕಾಣಿಕೆ', 'ಭಾರತ ಮಾತೆಯ ವಾಕ್ಯ' ಮತ್ತು 'ಮೈಸೂರ ಮಕ್ಕಳು' ಕವನಗಳು ಶ್ರೀಯವರ ಸ್ವತಂತ್ರ ರಚನೆಗಳಾದರೆ, ಉಳಿದವುಗಳು ಆಂಗ್ಲ ಸಾಹಿತ್ಯದಲ್ಲಿ ಪ್ರಸಿದ್ಧರಾಗಿರುವ ಮೂವತ್ತು ಮಂದಿ ಕವಿಗಳ ಐವತ್ತೆಂಟು ಕವನಗಳ ಅನುವಾದಗಳಾಗಿವೆ. ಇದರಲ್ಲಿ ಬರ್ನ್ಸ್ ನ ಏಳು ಕವನಗಳು, ವರ್ಡ್ಸ್-ವರ್ತ್(Wordsworth) ನ ಐದು ಕವನಗಳು, ಷೇಕ್ಸ್ ಪಿಯರ್(Shakespear)ನ ಎರಡು ಕವನಗಳು ಸೇರಿವೆ.

ನ್ಯೂಮನ್ ಕವಿ ಬರೆದ 'Lead Kindly Light' ಎಂಬ ಕವಿತೆಯ ಕನ್ನಡದ ಅನುವಾದ 'ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.

ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿದ್ದ ಶ್ರೀಯವರು, ಸಹಜವಾಗಿಯೇ ಈ ಭಾಷೆಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದವರಾಗಿದ್ದರೂ, ಕನ್ನಡದ ಬಗ್ಗೆ ಅವರಿಗಿದ್ದ ಪ್ರೇಮ ಅಸದೃಶ್ಯವಾದದ್ದು. 'ಕನ್ನಡ ನಾಡಿಗೆ ಕನ್ನಡವೇ ಗತಿ ಅನ್ಯಥಾ ಶರಣಂ ನಾಸ್ತಿ' ಎಂಬುದನ್ನು ಅಕ್ಷರಶಃ ನಂಬಿದ್ದವರು. ಎಲ್ಲಾ ಹಂತದಲ್ಲಿಯೂ ತಾಯಿ ನುಡಿಗೆ ಮೊದಲ ಪ್ರಾಶಸ್ತ್ಯ, ಮನ್ನಣೆ ದೊರಕಬೇಕೆಂಬ ತತ್ವಕ್ಕೆ ಜೋತು ಬಿದ್ದವರಾಗಿದ್ದರು. ಅವರ 'ಕಾಣಿಕೆ' ಪದ್ಯದ ಪ್ರಾರಂಭದ ಸಾಲುಗಳಲ್ಲಿ ಇದು ಸ್ಪಷ್ಟವಾಗಿ ಗೊಚರಿಸುತ್ತದೆ.

ಮೊದಲ ತಾಯ ಹಾಲ ಕುಡಿದು
ಲಲ್ಲೆಯಿಂದ ತೊದಲಿ ನುಡಿದು
ಕೆಳೆಯರೊಡನೆ ಬೆಳೆದು ಬಂದ
ಮಾತದಾವುದು
ನಲ್ಲೆಯೊಲವ ತೆರದು ತಂದ
ಮಾತದಾವುದು
ಸವಿಯ ಹಾಡ, ಕಥೆಯ ಕಟ್ಟಿ,
ಕಿವಿಯಲೆರದು, ಕರಳು ತಟ್ಟಿ,
ನಮ್ಮ ಜನರು, ನಮ್ಮ ನಾಡು,
ಎನಿಸಿತಾವುದು
ನಮ್ಮ ಕವಿಗಳೆಂಬ ಕೋಡು
ತಲೆಗದಾವುದು

ಬಿ.ಎಂ.ಶ್ರೀ. ಯವರು ಕನ್ನಡದ ಮೇಲೆ ಯಾವ ಬಗೆಯ ಪ್ರೇಮ ಇರಿಸಿಕೊಂಡಿದ್ದರೋ, ಹಾಗೆಯೇ ತಾವು ಅಪಾರ ಪಾಂಡಿತ್ಯ ಹೊಂದಿದ್ದ ಇಂಗ್ಲೀಷ್ ಸಾಹಿತ್ಯದ ಬಗೆಗೂ ಮೆಚ್ಚುಗೆ ಇರಿಸಿಕೊಂಡಿದ್ದರು. ಈ ಎರಡು ಅಂಶಗಳೂ ಅವರನ್ನು ಇಂಗ್ಲೀಷ್ ಗೀತೆಗಳ ಅನುವಾದಕ್ಕೆ ಪ್ರಚೋದಿಸಿದವೆಂಬುದು ಸ್ಪಷ್ಟವೇ ಇದೆ. ಕೆಳಗಿನ ಸಾಲುಗಳು ಇದನ್ನು ಮತ್ತಷ್ಟು ಪೂರಕಗೊಳಿಸುತ್ತವೆ.

ಪಡುವ ಕಡಲ ಹೊನ್ನ ಹೆಣ್ಣು
ನನ್ನ ಜೀವದುಸಿರು ಕಣ್ಣು
ನಲಿಸಿ, ಕಲಿಸಿ, ಮನವನೊಲಿಸಿ
ಕುಣಿಸುತಿರುವಳು
ಒಮ್ಮೆ ಇವಳು, ಒಮ್ಮೆ ಅವಳು
ಹೋಗೆ ನನಗೆ ಹಬ್ಬವಾಗಿ
ಇನಿಯರಿಬ್ಬರನ್ನು ತೂಗಿ
ಇವಳ ಸೊಬಗನವಳು ತೊಟ್ಟು
ನೊಡಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡಬಯಸಿದೆ

ಬಿ.ಎಂ.ಶ್ರೀ.ಯವರು ೧೯೦೬ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ೧೯೦೭ರಲ್ಲಿ ಮದರಾಸು ವಿವಿಯಲ್ಲಿ ಬಿ.ಎಲ್. ಪದವಿ, ೧೯೦೯ರಲ್ಲಿ ಎಂ.ಎ. ಪದವಿ ಪಡೆದರು. ಆನಂತರ 1909ರಿಂದ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಅಧ್ಯಾಪಕರಾಗಿ ನೇಮಕಗೊಂಡು, ಉಪಪ್ರಾಧ್ಯಾಪಕರಾಗಿ ಮತ್ತು ಪ್ರಾಧ್ಯಾಪಕರಾಗಿ ಬಡ್ತಿಯನ್ನು ಪಡೆದರು. 1926-1930, ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು.

1911ರಲ್ಲಿ ದಾರವಾಡದಲ್ಲಿ, 'ಕರ್ನಾಟಕ ವಿದ್ಯಾವರ್ಧಕ ಸಂಘ'ದ ಆಶ್ರಯದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಬಿ.ಎಂ.ಶ್ರೀ. ಯವರು 'ಕನ್ನಡ ತಲೆ ಎತ್ತುವ ಬಗೆ' ಎಂಬ ಯುಗಪ್ರವರ್ತಕ ಶ್ರೇಷ್ಠ ಭಾಷಣವನ್ನು ಮಾಡಿದರು.

ಬಿ.ಎಂ.ಶ್ರೀ. ಯವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ. ರಂಗಣ್ಣ, ತೀ.ನಂ. ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ, ಡಿ.ಎಲ್. ನರಸಿಂಹಚಾರ್, ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು.

ಸಂಕ್ಷಿಪ್ತ ಪರಿಚಯ

ಕಾವ್ಯನಾಮ ಶ್ರೀ
ನಿಜನಾಮ ಬಿ.ಎಂ.ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ)
ಜನನ ೧೮84, ಜನವರಿ 3
ಮರಣ ೧೯49, ಜನವರಿ 5
ತಂದೆ ಮೈಲಾರಯ್ಯ
ತಾಯಿ ಭಾಗೀರಥಮ್ಮ
ಜನ್ಮ ಸ್ಥಳ ಸಂಪಿಗೆ , ತುರುವೇಕೆರೆ ತಾಲ್ಲೂಕಿನ , ತುಮಕೂರು ಜಿಲ್ಲೆ

ಕೃತಿಗಳು

1. ಇಂಗ್ಲೀಷ್ ಗೀತಗಳು (ಕವನ ಸಂಕಲನ) 1921
2. ಹೊಂಗನಸುಗಳು (ಕವನ ಸಂಕಲನ) 1943
3. ಕನ್ನಡ ಬಾವುಟ (ಸಂಪಾದಿತ ಕೃತಿ) 1938
4. ಗದಾಯುದ್ಧನಾಟಕಂ (ನಾಟಕ) 1926
5. ಅಶ್ವತ್ಥಾಮನ್ (ನಾಟಕ) 1929
6. ಪಾರಸಿಕರು (ನಾಟಕ) 1935
7. ಕನ್ನಡ ಛಂಧಸ್ಸಿನ ಚರಿತ್ರೆ 1936
7. ಕನ್ನಡ ಸಾಹಿತ್ಯ ಚರಿತ್ರೆ (ಕನ್ನಡ ಕೈಪಿಡಿ ಭಾಗ-1) 1947
8. ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ (ಕನ್ನಡ ಕೈಪಿಡಿ ಭಾಗ-1) 1948
9. ಇಸ್ಲಾಂ ಸಂಸ್ಕೃತಿ 1948
10. ಶ್ರೀ ಸಾಹಿತ್ಯ 1983
11. A Hand Book of Rhetoric 1919

ಅಧ್ಯಕ್ಷತೆ, ಇತ್ಯಾದಿ

೧೯28 ಗುಲ್ಬರ್ಗದಲ್ಲಿ ನಡೆದ 14ನೇ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆ.
೧೯28 ಮೈಸೂರು ಮಹಾರಾಜರು ನೀಡಿದ 'ರಾಜಸೇವಾಸಕ್ತ' ಬಿರುದು.
೧೯38-1942 ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
1941 'ಸಂಭಾವನೆ' ಎಂಬ ಅಭಿನಂದನ ಗ್ರಂಥ.