ಉಲ್ಕೆಗಳು ಅಂತರಿಕ್ಷದಲ್ಲಿ ಬಹು ವೇಗವಾಗಿ ಚಲನೆಯಲ್ಲಿದ್ದರೂ ವಾತಾವರಣದ ಘರ್ಷಣೆಯ ಕೊರತೆಯಿಂದಾಗಿ ಹೊತ್ತಿ ಉರಿಯಲು ಸಾಧ್ಯವಾಗುವುದಿಲ್ಲ. ಭೂಮಿಯ ಗುರುತ್ವಾಕರ್ಷಣ ಬಲದಿಂದಾಗಿ ಇಂತಹ ವಸ್ತುಗಳು ಭೂಮಿಯೆಡೆಗೆ ಸೆಳೆಯಲ್ಪಡುತ್ತವೆ. ಉಲ್ಕೆಗಳು ಭೂ-ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ, ವಾತಾವರಣದ ಘರ್ಷಣೆಯಿಂದಾಗಿ ಹತ್ತಿ ಉರಿಯಲಾರಂಭಿಸುತ್ತವೆ ಮತ್ತು ಭೂ-ಮೇಲ್ಮೈನಿಂದ ಸುಮಾರು 90 ಕಿಲೋಮೀಟರ್ ಎತ್ತರದಲ್ಲಿಯೇ ಸಂಪೂರ್ಣವಾಗಿ ಭಸ್ಮಗೊಳ್ಳುತ್ತವೆ. ಈ ರೀತಿಯ ಸಾವಿರಾರು ಕಣಗಳು ಹೊತ್ತಿ ಉರಿದು ಇಡೀ ಬಾನಂಗಳದಲ್ಲೇ ಬೆಂಕಿಯ ಕಿಡಿಮಳೆಗೆರೆಯುತ್ತವೆ. ಇದನ್ನು 'ಉಲ್ಕಾಪಾತ' ಅಥವಾ 'ಉಲ್ಕಾವೃಷ್ಟಿ' ಎಂದು ಕರೆಯುತ್ತಾರೆ.