ಹುಲಿ ಪತ್ರಿಕೆ - 1

D.R.Bendre

'ಹುಲಿ ಪತ್ರಿಕೆ - 1' ರೋಚಕವಾದ, ಓದಲು ಪ್ರಾರಂಭಿಸಿದರೆ, ಮುಗಿಯದ ಹೊರತು ಕೆಳಗಿಡಲಾಗದ ಕಾದಂಬರಿ. ಪ್ರತಿ ಅಧ್ಯಾಯದಲ್ಲೂ ಕಥೆಯನ್ನು ಮುಂದುವರೆಸುತ್ತಾ, ರೋಚಕತೆಯನ್ನು ಹೆಚ್ಚಿಸುವಲ್ಲಿ ಅನುಷ್ ಶೆಟ್ಟಿಯವರು ಯಶಸ್ವಿಯಾಗಿದ್ದಾರೆ.

ಕಥಾಹಂದರ

ಲಂಡನ್ನಿಂದ ಹಳ್ಳಿಗೆ ಹಿಂದಿರುಗುವ ಸಾರಂಗ, ಮೂರು ವರ್ಷಗಳಲ್ಲಿ ಹಳ್ಳಿಯಲ್ಲಿ ಆದ ಬದಲಾವಣೆಗಳನ್ನು ನೊಡುತ್ತಾನೆ. ಪಟೇಲರ ಮಗ ಸುಮಂತ ಕಾಡಿನೆಡೆಗೆ ಹೋಗಿ ಕಾಣೆಯಾಗಿರುತ್ತಾನೆ. ಕಾಡಿನಲ್ಲಿ ಹುಲಿಯೊಂದು ಬಂದು ಸೇರಿರುವುದರಿಂದ ಜನ ಆತಂಕಗೊಂಡಿರುತ್ತಾರೆ ಮತ್ತು ಶೀಘ್ರದಲ್ಲಿ ಸುಮಂತನ ಪತ್ತೆಗಾಗಿ ಪ್ರಯತ್ನಿಸುತ್ತಿರುತ್ತಾರೆ. ಹಳ್ಳಿಯ ಜನ ಕಾಣೆಯಾದ ಸುಮಂತನ ಹುಡುಕಾಟದಲ್ಲಿರುವುದನ್ನು ನೋಡಿ ಸಾರಂಗ ತಾನೂ ಕೂಡ ಹುಡುಕಾಟದಲ್ಲಿ ತೊಡಗುತ್ತಾನೆ.

ಆಶ್ಚರ್ಯಕರ ರೀತಿಯಲ್ಲಿ 'ಹುಲಿ ಪತ್ರಿಕೆ' ಹೆಸರಿನ ಪತ್ರಿಕೆಯೊಂದು ಆಗಾಗ ಆ ಹಳ್ಳಿಗೆ ತಲುಪುತ್ತಿದ್ದು, ಹಳ್ಳಿಯಲ್ಲಿನ ಎಲ್ಲಾ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತದೆ. ತಪ್ಪಿಸ್ಥರನ್ನು ನಿರ್ಧಾಕ್ಷಿಣ್ಯವಾಗಿ ಟೀಕಿಸಿ, ತಪ್ಪನ್ನು ಬಯಲು ಮಾಡಿ ಎಚ್ಚರಿಸುವ 'ಹುಲಿ ಪತ್ರಿಕೆ', ಹಳ್ಳಿಯ ಜನರಿಗೆ ನೈತಿಕತೆಯನ್ನು ನೆನಪಿಸಿ, ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿರುತ್ತದೆ.

ಪತ್ರಿಕೆಯ ನೇರ ನುಡಿ ಬಹುತೇಕ ಹಳ್ಳಿಗರಿಗೆ ಒಳ್ಳೆಯದನ್ನು ಮಾಡಿದ್ದರೂ ಒಂದು ವರ್ಗದ ಜನರಿಗೆ ಮಾರಕವಾಗಿರುತ್ತದೆ. ಇದರಲ್ಲಿ ಆ ಹಳ್ಳಿಯ ಪೋಲಿಸ್ ಇನ್ಸ್ಪೆಕ್ಟರ್, ರಸ್ತೆ ಮಾಡುವ ಕಾಂಟ್ರ್ಯಾಕ್ಟರ್ ಸೇರಿರುತ್ತಾರೆ. ಈ ಪತ್ರಿಕೆಯ ಮೂಲವನ್ನು ಹುಡುಕಲು ಅವರು ಮಾಡುವ ಪ್ರಯತ್ನಗಳು ಮತ್ತು ಅದರ ಪರಿಣಾಮಗಳು ಕಥೆಯ ಒಂದು ಆಯಾಮವಾದರೆ, ಕಾಣೆಯಾದ ವ್ಯಕ್ತಿಯ ಹುಡುಕಾಟ ಮತ್ತೊಂದು ಆಯಾಮ. ಈ ಎರಡು ವಿಷಯಗಳು ಕಥೆಯುದ್ಧಕ್ಕೂ ಹೆಣೆದುಕೊಂಡು, ಓದುಗರ ಕಾತರತೆಯನ್ನು ಹೆಚ್ಚಿಸುತ್ತವೆ.

ಕಥೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಹಳ್ಳಿಯ ಹೆಂಡದಂಗಡಿ ಮತ್ತು ಅಲ್ಲಿಗೆ ಬರುವ ಪಕ್ಕದ ಹಳ್ಳಿಯ ಜನ. ಈ ಎರಡು ಹಳ್ಳಿಗಳ ನಡುವೆ ನದಿ ಹರಿಯುತ್ತಿದ್ದು, ಹೆಂಡದಂಗಡಿಗೆ ಬರಲು ದೋಣಿಯೇ ಏಕೈಕ ಮಾರ್ಗ. ತಮ್ಮ ಹಳ್ಳಿಯಲ್ಲಿ ಸಾರಾಯಿ ನಿಷಿದ್ಧವಾದ್ದರಂದ, ಪರ ಹಳ್ಳಿಯ ಜನರು ದೋಣಿಯ ಮುಖಾಂತರ ಹೆಂಡದಂಗಡಿಗೆ ಬರುತ್ತಿರುತ್ತಾರೆ. ಕಥೆಯುದ್ದಕ್ಕೂ ಈ ಅಂಗಡಿ ಜನರ ಯೋಚನೆಗಳನ್ನು, ಪರಿಸ್ಥಿತಿಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕಥೆ ಮುಂದುವರೆದಂತೆ, 'ಹುಲಿ ಪತ್ರಿಕೆ'ಯಲ್ಲಿ ಸುಮಂತ ಜೀವಂತವಾಗಿರುವುದು ಪ್ರಕಟವಾಗುತ್ತದೆ. ಸುಮಂತನನ್ನು ಹುಲಿ ಪತ್ರಿಕೆಯ ಹುಲಿಯೇ ಕರೆ ತರುವುದಾಗಿ, ಹಳ್ಳಿಯ ಜನರು ಎರಡು ದಿನ ಕಾಡಿನೆಡೆಗೆ ಹೋಗದಿರುವಂತೆ ಕೋರಲಾಗುತ್ತದೆ. ಇದನ್ನು ಸುಮಂತನ ತಂದೆ, ಊರಿನ ಪಟೇಲ ಪಾಲಿಸಲು ಅನುವಾಗುತ್ತಾನೆ ಮತ್ತು ಪೋಲಿಸರಿಗೆ ಹಾಗೆಯೇ ಮಾಡಲು ಕೊರುತ್ತಾನೆ.

'ಹುಲಿ ಪತ್ರಿಕೆ'ಯ ಬಗ್ಗೆ ವಿರೋಧ ಹೊಂದಿರುವ ಪೋಲೀಸ್ ಇನ್ಸ್ಪೆಕ್ಟರ್, ಹುಡುಕಾಟ ನಿಲ್ಲಿಸಲು ನಿರಾಕರಿಸುತ್ತಾನೆ. ಇದರಿಂದ ಪಟೇಲರು ಮತ್ತು ಪೋಲೀಸರ ನಡುವೆ ಹೊಡೆದಾಟ ನಡೆಯುತ್ತದೆ. ಪಟೇಲರೊಂದಿಗೆ, ಹಳ್ಳಿಯ ಕೆಲವರು ಜೈಲು ಸೇರಬೇಕಾಗುತ್ತದೆ. ಹೊಡೆದಾಟದ ಪರಿಣಾಮವಾಗಿ ಎರಡು ದಿನಗಳ ಕಾಲ ಯಾರೂ ಕಾಡಿಗೆ ತೆರಳುವುದಿಲ್ಲ. ಎರಡು ದಿನಗಳ ನಂತರ ಸುಮಂತ ತಿರುಗಿ ಬರದಿದ್ದಾಗ ಅವನನ್ನು ಹುಡುಕಿಕೊಂಡು ಜನರು ಮತ್ತೆ ಕಾಡಿಗೆ ಹೋಗುತ್ತಾರೆ...

ಕಥಾ ವಿಶ್ಲೇಷಣೆ

'ಹುಲಿ ಪತ್ರಿಕೆ - 1' ಕಾದಂಬರಿಯಲ್ಲಿ ಹುಲಿಯೇ ಮುಖ್ಯ ಪಾತ್ರಧಾರಿ. ಇದು ಎರಡು ಹುಲಿಗಳ ಕುರಿತಾದ ಕಥೆ. ಮೊದಲನೆಯದು ಹಳ್ಳಿಯ ಪಕ್ಕದಲ್ಲಿನ ಕಾಡಿಗೆ ಬಂದು ಸೇರುವ ಹುಲಿ ಮತ್ತೊಂದು ಪತ್ರಿಕೆಯ ಒಕ್ಕಣೆಯಲ್ಲಿ ಬರುವ ಹುಲಿ. ಜನರಲ್ಲಿ ಭಯ ಉಂಟುಮಾಡುವುದು ಇವೆರಡು ಹುಲಿಗಳ ನಡುವಿನ ಸಾಮ್ಯತೆ. ನಿಷಿದ್ಧತೆಯ ಕಡೆಗೆ ಜನ ಧಾವಿಸುವುದನ್ನು ತಡೆಯುವುದು ಹುಲಿಯ ಮುಖ್ಯ ಗುರಿ. ಕಾಡಿನೆಡೆಗೆ ಜನ ಧಾವಿಸುವುದು ಒಂದು ನಿಷಿದ್ಧವಾದರೆ, ಜನರಿಗೆ ಮೋಸ, ವಂಚನೆಗಳನ್ನು ಮಾಡುವುದು ಮತ್ತೊಂದು ನಿಷಿದ್ಧ. ಇವೆರಡನ್ನು ಹುಲಿ ಭಯದಂದ ತಡೆಯಲೆತ್ನಿಸುವುದು ಈ ಕಥೆಯ ಮುಖ್ಯಾಂಶ.

ಮಾಧ್ಯಮ(Media) ವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭವೆಂದೇ ಕರೆಯಲಾಗಿದೆ. ಒಂದು ಪತ್ರಿಕೆ, ಯಾವುದೇ ನಿರ್ಬಂಧ, ಕಟ್ಟಳೆಗಳಿಲ್ಲದಿದ್ದರೆ ಸ್ವತಂತ್ರವಾಗಿ ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಬಹುದು ಎಂಬ ಸೂತ್ರದಲ್ಲಿ ಈ ಕಥೆಯನ್ನು ಹೆಣೆಯಲಾಗಿದೆ.

ಹಳ್ಳಿಯ ಕೆಲ ಯುವಕರು ಸಾಧನೆಯ ಛಲದಲ್ಲಿ, ಸಮಾಜಕ್ಕಾಗಿ ದುಡಿವ ಆದರ್ಶವನ್ನು ಇಲ್ಲಿ ಬಿಂಭಿಸಲಾಗಿದೆ.

ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಸಾರಂಗ ಹಳ್ಳಿಗೆ ಬರುವುದನ್ನು, ಹುಲಿ ಕಾಣಿಸಿಕೊಳ್ಳುವುದನ್ನು ಕಥೆಯ ನಡೆಗೆ ಸರಿಹೊಂದುವಂತೆ ಬಳಸಿಕೊಳ್ಳುವಲ್ಲಿ ಕಾದಂಬರಿಕಾರ ಅನುಷ್ ಶೆಟ್ಟಿಯವರು ಯಶಸ್ವಿಯಾಗಿದ್ದಾರೆ.

ಹೆಂಡದಂಗಡಿಯಲ್ಲಿ ಜನರ ಮಾತುಗಳು, ನಡೆವ ಗಲಾಟೆಗಳು ಹಳ್ಳಿಯ ಸಾಮಾನ್ಯ ಬದುಕನ್ನು ದರ್ಶಿಸುತ್ತವೆ. ಕಥೆಗೆ ಪೂರಕವಾಗಿ ಹಳ್ಳಿಯ ಆಗು ಹೋಗುಗಳನ್ನು ಓದುಗನಿಗೆ ತಿಳಿಸುವ ಕೆಲಸವನ್ನು ಮಾಡುತ್ತದೆ.

ಓದುಗರಿಗೆ

184 ಪುಟಗಳುಳ್ಳ 'ಹುಲಿ ಪತ್ರಿಕೆ - 1' ಇತ್ತೀಚೆಗೆ ಬಿಡುಗಡೆಯಾದ ಉತ್ತಮ ಕಾದಂಬರಿಗಳಲ್ಲಿ ಒಂದು.

  • ಲೇಖಕರು: ಅನುಷ್ ಶೆಟ್ಟಿ
  • ಪುಟಗಳು: 184
  • ಪ್ರಕಾಶಕರು: ಅನುಗ್ರಹ ಪ್ರಕಾಶನ
  • ಬೆಲೆ: 150

ಪುಸ್ತಕವನ್ನು ಕೆಳಗಿನ ಲಿಂಕ್ ಗಳ ಮೂಲಕ ಕೊಳ್ಳಬಹುದು.

ತತ್ಸಮಾನ ಜ್ಞಾನ ಪುಟಗಳು

}