ಎಲ್ಲಾದರು ಇರು ಎಂತಾದರು ಇರು

ಕೆ.ವಿ. ಪುಟ್ಟಪ್ಪ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ಗೋವಿನ ಓ ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀನಮ್ಮಗೆ

ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ !

ನೀ ಮೆಟ್ಟುವ ನೆಲ ಅದೇ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ,

ನೀ ಮುಟ್ಟುವ ಮರ ಶ್ರೀಗಂಧದ ಮರ

ನೀ ಕುಡಿಯುವ ನೀರ್ ಕಾವೇರಿ

ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಪೆಂಪಿನ ಬನವಾಸಿಗೆ ಕರಗುವ ಮನ

ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ

ಜೋಗದ ಜಲಪಾತದಿ ಧುಮುಕುವ ಮನ

ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ,

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರಸರೋಮಂಚನಗೊಳುವ ಮನ

ಎಲ್ಲಿದ್ದರೆ ಏನ್? ಎಂತ್ತಿದ್ದರೆ ಏನ್?

ಎಂದೆಂದಿಗೂ ತಾನ್ -

ಕನ್ನಡವೇ ಸತ್ಯ

ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯಾ!