ನರನಾದ ಮೇಲೆ

ಪುರಂದರ ದಾಸರು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು || ಪ ||

ಭೂತ ದಯಾಪರನಾಗಿರಬೇಕು

ಪಾತಕವೆಲ್ಲ ಕಳೆಯಲು ಬೇಕು

ಮಾತು ಮಾತಿಗೆ ಹರಿಯೆನ್ನಬೇಕು || ೧ ||

ಆರು ವರ್ಗ ನಳಿಯಬೇಕು

ಮೂರು ಗುಣಗಂಗಳ ಮೀರಲು ಬೇಕು

ಸೇರಿ ಬ್ರಹ್ಮನೊಳಿರಬೇಕು || ೨ ||

ಭೇದಹಂಕಾರವ ನೀಗಲುಬೇಕು

ಮಾಧವ ಸ್ಮರಣೆಯೊಳಿರಬೇಕು

ಅಷ್ಟ ಮದಂಗಳ ತಿಳಿಯಲುಬೇಕು || ೩ ||

ದುಷ್ಟರ ಸಂಗವ ಬಿಡಲುಬೇಕು

ಕೃಷ್ಣ ಕೇಶವ ಎನ್ನಬೇಕು

ವೇದ ಶಾಸ್ತ್ರವನೋದಲುಬೇಕು || ೪ ||

ಶಾಂತಿ ಕ್ಷೇಮ ದಯೆ ಪಿಡಿಯಲು ಬೇಕು

ಭ್ರಾಂತಿ ಕ್ರೋಧವ ಕಳೆಯಲು ಬೇಕು

ಸಂಗದಿ ರತಿಯಿರಬೇಕು || ೫ ||

ಗುರುವಿನ ಚರಣಕ್ಕೆರಗಲು ಬೇಕು

ಶರಣೋಪಾಯವರಿಯಬೇಕು

ವಿರಕ್ತಿ ಮಾರ್ಗದಲಿರಬೇಕು || ೬ ||

ಬಂದದ್ದುಂಡು ಸುಖಿಸಲು ಬೇಕು

ನಿಂದಾಸ್ತುತಿಗಳ ತಾಳಲು ಬೇಕು

ತಂದೆ ಪುರಂದರ ವಿಠಲನ ನೆನೆಯಬೇಕು || ೭ ||