ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ

ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ

ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು

ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು

ಕೊನೆಯಿರದ ಏಕಾಂತವೆ ಒಲವೆ || ಪ ||

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ

ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ

ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ

ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ

ಅವಳನ್ನೇ ಜಪಿಸುವುದೆ ಒಲವೆ || ೧ ||

ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ

ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿಬಿಡಬಹುದೆ

ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ

ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ

ಒಂಟಿತನದ ಗುರುವೇ ಒಲವೆ || ೨ ||

ಗಣೇಶ್ ಜಯಂತ್ ಕಾಯ್ಕಿಣಿ ಸೊನು ನಿಗಮ್ ವಿ. ಹರಿಕೃಷ್ಣ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail