ಪಕ್ಷಿ: ಭಾರತದ ಅರಿಶಿನ ಬುರುಡೆ

Indian Golden Oriole
ಭಾರತದ ಅರಿಶಿನ ಬುರುಡೆ (ಹೆಣ್ಣು)

ಸಂಕ್ಷಿಪ್ತ ಮಾಹಿತಿ

ಇತರ ಹೆಸರುಗಳು ಇಂಡಿಯನ್ ಗೊಲ್ದನ್ ಓರಿಯೋಲ್ (Indian Golden Oriole), ಅರಿಶಿನ ಬುರುಡೆ, ಹೊನ್ನಕ್ಕಿ, ಸುವರ್ಣ ಪಕ್ಷಿ, ಮದುವಣಗಿತ್ತಿ, ಮಂಜಲಪಕ್ಕಿ, ಮಂಜಲಕ್ಕಿ (ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ)
ದ್ವಿನಾಮ (Binomial name) ಒರಿಯೋಲಸ್ ಕುಂಡೂ (Oriolus Kundoo)
ಆವಾಸ ಸ್ಥಾನ ಕುರಚಲು-ಕಾಡು, ಅಲ್ಪ-ನಿತ್ಯ ಹರಿದ್ವರ್ಣ ಕಾಡು, ಗೋಮಾಳಗಳು, ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶ
ವ್ಯಾಪ್ತಿ ಭಾರತ, ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕಿಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಮತ್ತು ನೇಪಾಳ
ಆಹಾರ ಕ್ರಮ ಹಣ್ಣುಗಳು, ಕೀಟಗಳು, ಹೂವಿನ ಮಕರಂದ ಮತ್ತು ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳ ಹಣ್ಣುಗಳು.

ವೈಜ್ಞಾನಿಕ ವರ್ಗೀಕರಣ (Scientific classification)

ಸಂಕುಲ (Kingdom) ಅನಿಮೇಲಿಯಾ (Animalia)
ವಂಶ (Phylum) ಕೊರ್ಡಟ (Chordata)
ವರ್ಗ (Class) ಏವ್ಸ್ (Aves)
ಗಣ (Order) ಪೆಸ್ಸೆರಿಫಾರ್ಮ್ಸ್ (Passeriformes)
ಕುಟುಂಬ (Family) ಓರಿಲಿಡೆ (Oriolidae)
ಜಾತಿ (Genus) ಓರಿಯೋಲಸ್ (Oriolus)
ಪ್ರಭೇದ (Species) ಓರಿಯೋಲಸ್ ಕುಂಡು (Oriolus kundoo)

ಹಳದಿ ಹೊನ್ನಕ್ಕಿ ಅಥವಾ ಅರಿಶಿನ ಬುರುಡೆ, ಮೈನಾ ಗಾತ್ರದ ಹಕ್ಕಿ. ಮೈ ಎಲ್ಲಾ ಅರಿಶಿಣ ಬಣ್ಣ ಹೊಂದಿ, ಕೆಂಪು ಕೊಕ್ಕು, ಕಾಡಿಗೆ ತೀಡಿದಂತೆ ಕಣ್ಣಿನ ಬಳಿ ಕಪ್ಪು ಬಣ್ಣ ಹೊಂದಿರುವುದರಿಂದ ಇದನ್ನು ಮದುವಣಗಿತ್ತಿ ಹಕ್ಕಿ ಎಂದೂ ಕೂಡ ಕರೆಯಲಾಗುತ್ತದೆ.

ಹಿಂದೆ ಈ ಹಕ್ಕಿಗಳನ್ನು ಯುರೇಷ್ಯದ ಹಳದಿ ಓರಿಯಲ್ (Eurasian Golden Oriole) ನ ಉಪಜಾತಿ ಪಕ್ಷಿ ಎಂದು ಪರಿಗಣಿಸಲಾಗಿತ್ತು. ಆದರೆ ಬಾಲದಲ್ಲಿನ ಹೆಚ್ಚಿನ ಹಳದಿ ಬಣ್ಣ, ಕೂಗುವ ವಿಧಾನ ಮತ್ತು ಕಣ್ಣಿನ ಬಳಿ ತೀಡಿದಂತೆ ಇರುವ ಕಪ್ಪು ಬಣ್ಣದಿಂದಾಗಿ, ಇವುಗಳನ್ನು ಈಗ ತಮ್ಮದೇ ಆದ ಮೂಲ ಜಾತಿಯಾಗಿ ಗುರುತಿಸಲಾಗಿದೆ.

Indian Golden Oriole
ಭಾರತದ ಅರಿಶಿನ ಬುರುಡೆ (ಗಂಡು)

ಯುರೇಷ್ಯಾದ ಅರಿಶಿನ ಬುರುಡೆಗಳಿಗೆ ಹೋಲಿಸಿದರೆ ಭಾರತದ ಅರಿಶಿನ ಬುರುಡೆಯ ಕಪ್ಪು ರೆಕ್ಕೆಯ ಎರಡನೆ ಹಾಗು ಮೂರನೆ ಮಡಿಚಿನಲ್ಲಿರುವ ಪುಕ್ಕಗಳ ತುದಿ ಹಳದಿಯಾಗಿರುತ್ತದೆ. ಹೆಣ್ಣು ಹಕ್ಕಿಗಳ ಕೆಳಭಾಗದಲ್ಲಿನ ಭೂದಿಬಣ್ಣದ ಕಿರು ಪಟ್ಟೆಗಳು ಯುರೇಷ್ಯಾದ ಹೆಣ್ಣು ಬಳಗಕ್ಕಿಂತಲೂ ತೀಕ್ಷ್ಣವಾಗಿರುತ್ತದೆ. ಯುರೇಷ್ಯಾದ ಅರಿಶಿನ ಬುರುಡೆ ಗಂಡು ಹಕ್ಕಿಗಳ ಬಾಲವು ಭಾರತದ ಅರಿಶಿನ ಬುರುಡೆಗಳ ಬಾಲಕ್ಕಿಂತ ಉದ್ದವಿರುತ್ತದೆ.

ಹಣ್ಣುಗಳು, ಕೀಟಗಳು, ಹೂವಿನ ಮಕರಂದ ಮತ್ತು ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳ ಹಣ್ಣುಗಳು ಅರಿಶಿಣ ಬುರುಡೆ ಹಕ್ಕಿಯ ಆಹಾರ. ಇವು ಸಾಮಾನ್ಯವಾಗಿ ಗಲಾಟೆ ಮಾಡದ ಪಕ್ಷಿಗಳಾದರೂ, ಮರದಲ್ಲಿ ಬಿಟ್ಟ ಹಣ್ಣು ತಿನ್ನುವಾಗ ಇತರ ಹಕ್ಕಿಗಳೊಡನೆ ಸೇರಿ ಗಲಾಟೆ ಮಾಡುತ್ತವೆ. ಇವು ಅವು ಲಂಟ್ರಾಣಿ (ಲಾಂನ) ಹಾಗು ಇತರ ಬಗೆಯ ಚೆರ್ರಿ ಹಣ್ಣುಗಳ ಬೀಜಪ್ರಸಾರಕ್ಕೆ ಕಾರಣವಾಗಿವೆ.

ಏಪ್ರಿಲ್ ನಿಂದ ಆಗಸ್ಟ್ ಮಾಸಗಳಲ್ಲಿ ಸಂತಾನ ಅಭಿವೃದ್ಧಿ ನಡೆಸಿ ಇವು ಜೇಡರ ಬಲೆಯನ್ನೂ, ಹುಲ್ಲು, ನಾರು, ಮತ್ತು ಎಲೆಗಳಿಂದ ಎರಡು ಕೊಂಬೆಗಳ ಮಧ್ಯದಲ್ಲಿ ತೊಟ್ಟಿಲಿನಂತಹ ಗೂಡನ್ನು ಕಟ್ಟುತ್ತವೆ. ಸಾಧಾರಣವಾಗಿ ಇವು ಕಾಜಾಣ/ಕರಿ-ಭುಜಂಗ (Black Drongo) ಹಕ್ಕಿಯ ಗೂಡಿನ ಅಕ್ಕಪಕ್ಕದಲ್ಲಿ ತಮ್ಮ ಗೂಡನ್ನು ಮಾಡುತ್ತವೆ. ಬಿಳಿಯ ತೊಗಟಿನಮೇಲೆ ಮಣ್ಣು ಹಾಗು ಕಪ್ಪು ಬಣ್ಣದ ಬೊಟ್ಟುಗಳುಳ್ಳ ೨-೩ ಮೊಟ್ಟೆಗಳನ್ನು ಹಾಕಿ, ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಗೂಡು ಹಾಗು ಮರಿಗಳನ್ನು ಪಾಲಿಸುತ್ತವೆ. ಇವುಗಳ ಸಂತತಿಗೆ ಕಾಗೆ, ಗಿಡಗ ಮತ್ತು ಇತರ ಭಕ್ಷಕರಿಂದ ಆತಂಕ ಹೆಚ್ಚು.