ಪಕ್ಷಿ: ನೀಲಿ ಮುಖದ ಕೈರಾತ
ಸಂಕ್ಷಿಪ್ತ ಮಾಹಿತಿ
ಇತರ ಹೆಸರುಗಳು | ನೀಲಿ ಕಣ್ಣಿನ ಕೈರಾತ, Blue Faced Malkoha |
ದ್ವಿನಾಮ (Binomial name) | ಫೆನಿಕೊಫಿಯಸ್ ವಿರಿಡಿರೊಸ್ಟ್ರಿಸ್ (Phaenicophaeus Viridirostris) |
ಆವಾಸ ಸ್ಥಾನ | ಕುರಚಲು-ಕಾಡು |
ವ್ಯಾಪ್ತಿ | ದಕ್ಷಿಣ ಭಾರತ, ಶ್ರೀಲಂಕಾ |
ಆಹಾರ ಕ್ರಮ | ಕೀಟಗಳು, ಚಿಟ್ಟೆಗಳು, ಅಕಶೇರುಕಗಳು |
ವೈಜ್ಞಾನಿಕ ವರ್ಗೀಕರಣ (Scientific classification)
ಸಂಕುಲ (Kingdom) | ಅನಿಮೇಲಿಯಾ (Animalia) |
ವಂಶ (Phylum) | ಕೊರ್ಡಟ (Chordata) |
ವರ್ಗ (Class) | ಏವ್ಸ್ (Aves) |
ಗಣ (Order) | ಕುಕುಲಿಫಾರ್ಮ್ಸ್ (Cuculiformes) |
ಕುಟುಂಬ (ಮಿಲ್ಯ್) | ಕುಕುಲಿಡೆ (Cuculidae) |
ಜಾತಿ (Genus) | ಫೆನಿಕೊಫಿಯಸ್ (Phaenicophaeus) |
ಪ್ರಭೇದ (Species) | ಫೆನಿಕೊಫಿಯಸ್ ವಿರಿಡಿರೊಸ್ಟ್ರಿಸ್ (Phaenicophaeus Viridirostris) |
ಕೈರಾತಗಳು ಏಷ್ಯಾದ ಉಷ್ಣವಲಯದಲ್ಲಿ ಕಂಡುಬರುವ, ಕೋಗಿಲೆ ಜಾತಿಗೆ ಸೇರಿದ ಪಕ್ಷಿಗಳಾಗಿವೆ. ಇಂಗ್ಲೀಷ್ ನಲ್ಲಿ ಇವುಗಳನ್ನು 'ಮಲ್ಕೋಹ'(Malkoha) ಗಳೆಂದು ಕರೆಯಲಾಗುತ್ತದೆ. ಈವರೆಗೆ 9 ಬಗೆಯ ಕೈರಾತಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ನೀಲಿ ಮುಖದ ಕೈರಾತಗಳು ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುತ್ತವೆ.
ಸುಮಾರು 39 ಸೆ.ಮೀ. ಉದ್ದವಿರುವ ನೀಲಿ ಮುಖದ ಕೈರಾತಗಳು ತಲೆ ಮತ್ತು ಬೆನ್ನಿನ ಭಾಗದಲ್ಲಿ ನೀಲಿ ಮಿಶ್ರಿತ ಹೊಳೆಯುವ ಬೂದು ಬಣ್ಣದ ಪುಕ್ಕಗಳನ್ನು ಹೊಂದಿರುತ್ತದೆ. ಉದ್ದನೆಯ ಕಡು ಬಣ್ಣದ ಬಾಲ ಹೊಂದಿದ್ದು, ಬಾಲದ ಗರಿಗಳ ತುದಿಯು ಬಿಳಿ ಬಣ್ಣದ್ದಾಗಿರುತ್ತದೆ.
ಕೆನ್ನೆಯ ಮತ್ತು ಕೊರಳಿನ ಭಾಗದ ಪುಕ್ಕಗಳು ಚೂಪಾಗಿದ್ದು ಹಳದಿ ಮಿಶ್ರಿತ ಬಣ್ಣ ಹೊಂದಿರುವುದರಿಂದ ಚಿಕ್ಕ ಗೆರೆಗಳನ್ನು ಹೊಂದಿದಂತೆ ಕಾಣುತ್ತದೆ. ಕೊಕ್ಕು ತಿಳಿ ಹಸಿರು ಬಣ್ಣದ್ದಾಗಿದ್ದು, ಕೆಂಡದಂತಹ ಕೆಂಪು ಕಣ್ಣಿನ ಸುತ್ತಲಿನ ನೀಲಿ ಬಣ್ಣ ಗಮನ ಸೆಳೆಯುತ್ತದೆ. ಹೊರ ನೋಟಕ್ಕೆ ಗಂಡು ಮತ್ತು ಹೆಣ್ಣು ಕೈರಾತಗಳು ಒಂದೇ ರೀತಿಯಲ್ಲಿರುತ್ತವೆ.
ಇವುಗಳು ಕಾಲಿನಲ್ಲಿ ನಾಲ್ಕು ಬೆರಳುಗಳನ್ನು ಹೊಂದಿದ್ದು, ಎರಡು ಮುಂದಕ್ಕೂ ಮತ್ತೆರಡು ಹಿಂದಕ್ಕೂ ಮುಖ ಮಾಡಿರುತ್ತವೆ.
ಬಹುತೇಕ ಮಟ್ಟಿಗೆ ನೀಲಿ ಮುಖದ ಕೈರಾತಗಳು ಮೌನಿಗಳಗಿದ್ದು ಯಾವಗಲಾದರೊಮ್ಮೆ ಮೆಲುದನಿಯಲ್ಲಿ 'ಕ್ರಾ ಕ್ರಾ' ಎಂದು ಶಬ್ದ ಮಾಡುತ್ತವೆ. ಕೆಂಬೂತ ಪಕ್ಷಿಗಳಂತೆ ಇವು ಹೆಚ್ಚು ನಡೆದು ಅಥವಾ ಟೊಂಗೆಯಿಂದ ಟೊಂಗೆಗೆ ಹಾರಿ ದೂರ ಕ್ರಮಿಸುತ್ತವೆ.
ಕೀಟಗಳು, ಚಿಟ್ಟೆಗಳು ಮತ್ತು ಸಣ್ಣ ಕಶೇರುಕಗಳು ನೀಲಿ ಮುಖದ ಕೈರಾತಗಳ ಆಹಾರವಾಗಿದೆ.
ನೀಲಿ ಮುಖದ ಕೈರಾತಗಳು ಕುರುಚಲು ಪೊದೆಗಳಲ್ಲಿ ಸಣ್ಣ ಕಡ್ಡಿಗಳಿಂದ ಡುಗಳನ್ನು ಮಾಡಿ ಎರಡು, ಕೆಲವೊಮ್ಮೆ ಮೂರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಸಾಮಾನ್ಯವಾಗಿ ಮಾರ್ಚ್ ನಿಂದ ಆಗಸ್ಟ್ ನವರೆ ಇವು ಸಂತಾನಾಭಿವೃದ್ಧಿ ನಡೆಸುತ್ತವೆ.