ಕನ್ನಡವೆಂದರೆ

ಗೋಪಾಲಕೃಷ್ಣ ಅಡಿಗ

ಕನ್ನಡವೆಂದರೆ ತಾಯಿಯೆ, ದೇವಿಯೆ?

ನಾನೂ ನೀನು ಅವರು;

ಜನಮನದೊಳಗೂಡಿ ತುಡಿತ ಕಡಿತಗಳ

ಪ್ರತಿಕೃತಿ ಗತಿ ನೂರಾರು

ನಾದದ ಸಂಕೇತದ ಉಡುಪುಟ್ಟು

ಗಾಳಿಗೆ ಜಿಗಿವ ಜಗತ್ತು;

ಬಡತನ ಸಿರಿತನ ಎರಡು ಸಮಾನ,

ಅರ್ಥದ ಅಪಾರ್ಥದ ಗತ್ತು

ಪಂಪ ಕುಮಾರವ್ಯಾಸರ ದಾಸರ

ಶರಣರ ಜ್ಯೋತಿರ್ಲಿಂಗ;

ತಿಮ್ಮನ, ಬೋರನ, ಈರಗಮಾರರ

ಹೃದಯದ ಸಹಜ ತರಂಗ

ಮನಸ್ಸು ಮಾಗಿದರೇ ಇದು ಸುಸ್ವರ,

ಅನುಭವ ತಳೆವ ಶರೀರ;

ಹಿಂದಕೆ ನೋಡುತ ಮುಂದಕೆ ದುಡುಕುವ

ನದಿಯಂತಿದರ ವಿಹಾರ