ದ. ರಾ. ಬೇಂದ್ರೆ

ಏಳು ಶೂರರ ಖಣೀ ಏಳು ಶೂರರ ರಾಣಿ

ಏಳು ತೀರದ ವೀರರಸದ ವಾಣಿ

ಏಳು ಮೀರಿದ ಜಾನಿ, ಏಳು ಈ ಸ್ಥಿತಿಗಾಣಿ

ಏಳು ವರ ವರದ ಪಾಣಿ

ಶೂರ ಪುರುಷರ ಕೊನೆಯು ವೀರ ಕವಿಗಳ ಗೊನೆಯು

ಭೀರುತನವೆಂಬ ಶಲ್ಯಕ್ಕೆ ಮೊನೆಯು

ಧೀರ ಸತಿಯರ ತೆನೆಯು ವೀರರಸಗಳ ಸೊನೆಯು

ಈ ರೀತಿ ನಿನ್ನ ಮನೆಯು

ಭರದೆ ಬೆಳೆಯುವ ಬೆಳೆಯು ತ್ವರದೆ ಹರಿಯುವ ಹೊಳೆಯು

ಇರದೆ ಪ್ರತಿಕಾಲಕ್ಕೆ ಬರುವ ಮಳೆಯು

ವರಲಕ್ಷಣದ ಕಳೆಯು, ಸುರರ ಸೀಮೆಯ ಬೆಳೆಯು

ಇರುವಂಥ ನಿನ್ನ ಇಳೆಯು

ಸತ್ತಿರುವುದೆದೆಸೇರು ಸುತ್ತಿರುವ ವಿಷ ಹೀರು

ಬತ್ತಿರುವುದಮೃತ ಝರಿ ಮತ್ತೆ ತೋರು

ಸತ್ತುಳ್ಳ ನೂರಾರು ಬಿತ್ತುಗಳ ನೀನೂರು

ಕಿತ್ತು ಭಯ ಬಿಟ್ಟ ಬೇರು

ಅಂದಿನಂತಹ ಧನವು ಅಂದಿನಂತಹ ತನುವು

ಅಂದಿನಂತವರ ಹಿರಿದಾದ ಮನವು

ಅಂದೆ ಅಂದಿನತನವು ಚಂದದಾಟಕೆ ಅನುವು

ಎಂದು ತಂದೀತು ದಿನವು !

ನೀನು ನೆಲಸಿದ ಕಾಡು ಮಾನಿಸುವರೌ ನಾಡು

ಧ್ಯಾನಿಸುವರೌ ನಿನ್ನ ಹಾಡಿ ಹಾಡು

ಈ ನಾಡಿನೊಳು ಮಾಡು ಪ್ರಾಣಪುತ್ರರ ಬೀಡು

ಏನು ನಂದನದ ಪಾಡು !