ಕೆ. ಎಸ್. ನರಸಿಂಹಸ್ವಾಮಿ

ಕಿಟಕಿಯೊಳಗೆ ನಿಂದು ನಕ್ಕು,

ಕರೆಯುತಿಹನು ರಾಮಬಂಟ;

ಮನೆಯೊಳೆಲ್ಲ ಹರಿದು, ಹೊಕ್ಕು

ಹರಿಯುತಿಹನು ರಾಮಬಂಟ

ಜಾಣನವನು; ಬೆಳ್ಳಿಕುಳ್ಳ;

ಬಾಯಲೆರಡೆ ಪುಟ್ಟ ಹಲ್ಲು!

ಚೂರು ಮಾತು; ಮುದ್ದು ಕಳ್ಳ

ಅಲೆಯುತಿಹನು ಇಲ್ಲು, ಅಲ್ಲು!

ನನ್ನ ಕಂಡರವನಿಗಾಸೆ;

ಕೇಕೆ ಹಾಕಿ ನಗುವನವನು;

ನಮ್ಮ ದೊಡ್ಡ ಬೀದಿಯೊಳಗೆ

ರತ್ನದಂಥ ಕಂದನವನು

ಪುಟ್ಟ ಅಂಗಿಯೊಂದು ತೊಟ್ಟು,

ಹಣೆಗೆ ಕಪ್ಪು ಬಟ್ಟನಿಟ್ಟು;

ಹೊಳೆವ ದೊಡ್ಡ ಕಣ್ಣ ಬಿಟ್ಟು,

ಪುಟ್ಟ ಪುಟ್ಟ ಹೆಜ್ಜೆಯಿಟ್ಟು,

ಬೀದಿಯೊಳಗೆ ಬೆಳ್ಳಿಕಂದ

ಚಂದ್ರನಂತೆ ಬರುವನು;

'ಮಾವ' ಎಂದು ಪ್ರೀತಿಯಿಂದ

ಬೆರಳ ತೋರಿ ಕರೆವನು

ಓಡಿಬಂದ ಮಗುವನೆತ್ತಿ

'ನನ್ನ ಕಂದ' ಎನುವೆನು;

ತೊಳೆದ ಕಣ್ಗೆ ಮುತ್ತನೊತ್ತಿ

'ಜಾಣ' ಎಂದು ಕರೆವೆನು

ಹಾಲಿನಂತೆ ಅವನ ಮನಸು,

ದುಂಡುಮುತ್ತಿನಂತೆ ನುಡಿ,

ಅವನ ಕೇಕೆ ನನ್ನ ಕನಸು

ದೇವರವನು, ನಾನು ಗುಡಿ

ಎರಡು ಮನೆಗೆ ಅವನು ಕಂದ;

ಸೊಗಸುಗಾರ ಕಣ್ಣಿಗಂದ;

ಅವನು ತುಂಬಿದೊಲುಮೆಯಿಂದ

ನನ್ನ ಬದುಕಿನೆಲ್ಲ ಚಂದ

ಕತ್ತಲಲ್ಲಿ ಪುಟ್ಟ ಸೊಡರು

ಮನೆಯ ಬೆಳಕುಮಾಡಿದೆ;

ಹಿತ್ತಲಲ್ಲಿ ಮೊಲ್ಲೆಯರಳು

ಸಖದ ಕಂಪ ಹರಡಿದೆ

ರಾಮಬಂಟ ಬಹಳ ತುಂಟ;

ಮಕ್ಕಳೆಲ್ಲ ಹಾಗೆಯೆ!

ಅವನು ನನ್ನ ಪುಟ್ಟ ನೆಂಟ;

ಮಕ್ಕಳೆಲ್ಲ ದೇವರೆ!