ನಿಂದಕರಿರಬೇಕು

ಪುರಂದರ ದಾಸರು

ನಿಂದಕರಿರಬೇಕಿರಬೇಕು || ಪ ||

ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಹಿಯೋ ಹಾಂಗೆ || ಅ ||

ಅಂದಂದು ಮಾಡಿದ ಪಾಪವೆಂಬ ಮಲ

ತಿಂದು ಹೋಗುವರಯ್ಯ ನಿಂದಕರು

ವಂಧಿಸಿಸುತ್ತಿರುವ ಜನರೆಲ್ಲರೂ ನಮ್ಮ

ಪೊಂದಿಹ ಪುಣ್ಯವ ನೊಯ್ಯುವರಯ್ಯ || 1 ||

ದುಷ್ಟ ಜನರು ಈ ಸೃಷ್ಟಿಯಲ್ಲಿದ್ದರೆ

ಶಿಷ್ಟ ಜನರಿಗೆಲ್ಲ ಕೀರ್ತಿಗಳು

ಇಷ್ಟಪ್ರಧ ಶ್ರೀಕೃಷ್ಣ ನಿನ್ನೊಳು

ಇಷ್ಟೇ ವರವನು ಬೇಡುವೆನಯ್ಯ || ೨ ||

ದುರುಳ ಜನಂಗಳು ಚಿರಕಾಲವಿರುವಂತೆ

ಕರವ ಮುಗಿದು ವರ ಬೇಡುವೆನು

ಸರಿಪರಿ ತಮಸಿಗೆ ಗುರಿಯಹರಲ್ಲದೆ

ಪರಮ ದಯಾನಿಧಿ ಪುರಂದರ ವಿಠಲ || ೩ ||