ಹೆಣ್ಣೀನ ಜನುಮಾಕೆ

ಜಾನಪದ

ಹೆಣ್ಣೀನ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ

ಹೊನ್ನು ಕಟ್ಟುವರು ಉಡಿಯೊಳಗೆ || ಪ ||

ಎನಗೆ ಯಾರಿಲ್ಲಂತ ಮನದಗ ಮರುಗಿದರು

ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ ||

ಮನೆಯ ಹಿಂದಲ ಮಾವು ನೆನೆದಾರೆ ಘಮ್ಮೆಂದು

ನೆನೆದಂಗೆ ಬಂದ ನನ ಅಣ್ಣ | ಬಾಳೆಯ

ಗೊನೆಯ್ಹಾಂಗೆ ತೋಳ ತಿರುವೂತ ||

ಸರದಾರ ಬರುವಾಗ ಸುರಿದಾವು ಮಲ್ಲಿಗೆ

ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ

ಗೊನೆ ಬಾಗಿ ಹಾಲ ಸುರಿದಾವೊ ||

ಅಣ್ಣಾ ಬರುತಾನಂತ ಅಂಗಳಕೆ ಕೈಕೊಟ್ಟು

ರನ್ನ ಬಚ್ಚಲಿಗೆ ಮಣೆ ಹಾಕಿ | ಕೇಳೇನು

ತಣ್ಣಗಿರಲಣ್ಣ ತವರವರು ||