ಸತ್ಯವಂತರಿಗಿದು ಕಾಲವಲ್ಲ

ಪುರಂದರ ದಾಸರು

ಸತ್ಯವಂತರಿಗಿದು ಕಾಲವಲ್ಲ

ದುಷ್ಟಜನರಿಗೆ ಸುಭಿಕ್ಷಕಾಲ || ಪ ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ

ಪರಮ ಪಾಪಿಗಳಿಗೆ ಸುಭಿಕ್ಷ ಕಾಲ

ಸ್ಥಿರವಾದ ಪವಿತ್ರತೆಯ ಪರರು ನಿಂದಿಪ ಕಾಲ

ಧರೆಯೊಳು ಜಾರೆಯರ ಕೊಂಡಾಡುವ ಕಾಲ|| 1 ||

ಉಪಕಾರ ಮಾಡಿದರೆ ಅಪಕರಿಸುವ ಕಾಲ

ಸಕಲವು ತಿಳಿದವಗೆ ದುರ್ಭಿಕ್ಷ ಕಾಲ

ಸತಿ ಸುತರು ಎಂಬುವರ ನಂಬಲರಿಯದ ಕಾಲ

ಸಟೆಯಲ್ಲವಿದೇ ವಿಪರೀತ ಕಾಲ || ೨ ||

ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ

ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ

ನಿರ್ಮಲಾತ್ಮಕ್ ಸಿರಿ ಪುರಂದರ ವಿಠಲನ

ಮರ್ಮದೊಳು ಭಜಿಸಲರಿಯದ ಕಾಲವಯ್ಯ || ೩ ||