ಅಲ್ಲಿದೆ ನಮ್ಮ ಮನೆ

ಪುರಂದರ ದಾಸರು

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ || ಪ ||

ಕದ ಬಾಗಿಲಿರಿಸಿಹ ಕಳ್ಳ ಮನೆ ಇದು

ಮುದದಿಂದಲೋಲ್ಯಾಡೊ ಸುಳ್ಳು ಮನೆ

ಇದಿರಾಗಿ ವೈಕುಂಠ ವಾಸ ಮಾಡುವಂಥ

ಪದುಮನಾಭನ ದಿವ್ಯ ಬದುಕು ಮನೆ || 1 ||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡ

ಕೇಳಯ್ಯ ಹರಿಕಥೆ ಶ್ರವಣಂಗಳ

ನಾಳೆ ಯಮದೂತರು ಬಂದೆಳೆದೊಯ್ವಾಗ

ಮಾಳಿಗೆ ಮನೆ ಸಂಗಡ ಬಾರದಯ್ಯ || ೨ ||

ಮಡದಿ ಮಕ್ಕಳೆಂಬ ಹಂಬಲ ನಿನಗೇಕೊ

ಕಡು ಗೊಬ್ಬುತನದಲಿ ನಡೆಯದಿರು

ಒಡೆಯ ಶ್ರೀ ಪುರಂದರವಿಠಲನ ಚರಣದ

ದೃಢ ಭಕ್ತಿಯಲಿ ನೀ ಭಜಿಸಿಕೊ ಮನುಜ || ೩ ||