ಬಹುಕಾಲದಿಂದ ಎದೆಯಲ್ಲಿ ಕುದಿದ

ಕೆ. ಎಸ್. ನರಸಿಂಹಸ್ವಾಮಿ

ಬಹುಕಾಲದಿಂದ ಎದೆಯಲ್ಲಿ ಕುದಿದ

ಕನ್ನಡಿಗರಾಸೆ ಫಲಿಸಿ

ಒಂದಾದ ನಾಡು ಅಣಿಯಾದ ಹೆಸರ

ಮಣಿಪದಕವನ್ನು ಧರಿಸಿ

ಕನ್ನಡದ ಬದುಕು ತಲೆಯೆತ್ತಿ ನಿಂತ

ಮಂಗಳ ಮಹೂರ್ತದಲ್ಲಿ

ಮನೆಮನೆಯ ಮುಂದೆ ಮುಂಬೆಳಗಿನಲ್ಲಿ

ಸಂತಸದ ರಂಗವಲ್ಲಿ

ಈ ನಾಡಮಣ್ಣು ಇಲ್ಲಲ್ಲಿ ಕಪ್ಪು;

ಚಂದನದ ಕಂಪು, ತಂಪು;

ಜೇನಿಳಿವ ಹಣ್ಣು; ಮಲ್ಲಿಗೆಯ ಮುಡಿದ

ಚೆಲುವೆಯರ ನುಡಿಗಳಿಂಪು

ಹುಲಿ, ಸಲಗ, ಜಿಂಕೆ, ಹೆಬ್ಬಾವು ಸುಳಿವ

ಎತ್ತರದ ಹಸಿರು ಕಾಡು;

ನದಿ ಧುಮುಕುವಲ್ಲಿ ವಿದ್ಯುತ್ತು ಹಬ್ಬಿ

ಬೆಳಕಾದ ಸಿರಿಯ ಬೀಡು

ಕರಾವಳಿಯ ಮರಳಲ್ಲಿ ಬರುತಿಹಳು

ಧೀರೆ ತೆರೆಯನುಟ್ಟು,

ಪಡುಘಟ್ಟದಲ್ಲಿ ಕಂಗೊಳಿಸುತಿಹಳು

ಮಳೆಬಿಲ್ಲ ಮಕುಟವಿಟ್ಟು

ನಗುತಿಹಳು ತಾಯಿ, ಕನ್ನಡದ ದೇವಿ

ಬಾನೆದೆಗೆ ಮುತ್ತು ಕೊಟ್ಟು,

ದುಡಿವವರ ರಟ್ಟೆಗುಸಿರನ್ನು ತುಂಬಿ

ಕಣ್ಣಲ್ಲಿ ದೀಪವಿಟ್ಟು

ಹೊಸತೊಂದು ನಾಡ ಕಟ್ಟುವೆವು ತಾಯೆ,

ಬೆನ್ತಟ್ಟಿ ಮುಂದೆ ಕಳಿಸು;

ಮುಂದಿಟ್ಟ ಹೆಜ್ಜೆ ಹಿಂದೆಗೆಯದಂತೆ

ನಡೆಯುವುದ ನಮಗೆ ಕಲಿಸು

ಮೈಬೆವರ ಸುರಿಸಿ ದುಡಿವಂತೆ ಮಾಡು

ಒಳಭೇದವನ್ನು ಅಳಿಸು

ಬಡತನವ ತೊಡೆವ ಸಂಗ್ರಾಮದಲ್ಲಿ

ಶುಭವನ್ನು ನಮಗೆ ಹರಸು