ಅತ್ತಿತ್ತ ನೋಡದಿರು

ಕೆ. ಎಸ್. ನರಸಿಂಹಸ್ವಾಮಿ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ || ಪ ||

ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ || 1 ||

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,

ಮಲಗು ತೊಟ್ಟಿಲ ಸಿರಿಯೆ, ದೇವರಂತೆ

ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,

ಮಲಗು ಚಂದಿರನೂರ ಹೋಗುವೆಯಂತೆ || ೨ ||

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,

ವೀಣೆ ನುಡಿಸುವರಂತೆ, ಸುತ್ತ ನೆರೆದು|| ೩ ||

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ|| ೪ ||

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ

ಜೋ ಜೋಜೋ ಜೋ ಜೋ ಜೋಜೋ ಜೋ

ಜೋ ಜೋಜೋ ಜೋ ಜೋ ಜೋಜೋ ಜೋ || ೫ ||