ಪೊಗದಿರಲೋ ರಂಗ ಬಾಗಿಲಿಂದಾಚೆಗೆ

ಪುರಂದರ ದಾಸರು

ಪೊಗದಿರಲೋ ರಂಗ ಬಾಗಿಲಿಂದಾಚೆಗೆ || ಪ ||

ಭಾಗವತರು ಕಂಡರೆತ್ತಿಕೊಂಬರೊ ನಿನ್ನ || ಅ.ಪ. ||

ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ

ಪರಮಾತ್ಮನ ಕಾಣದರಸುವರೋ

ದೊರಕದ ವಸ್ತುವು ದೊರಕಿತು ತಮಗೆಂದು

ಹರುಷದಲಿ ಬಂದು ಕರೆದೆತ್ತಿ ಕೊಂಬರೋ || ೧ ||

ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ

ಪಗೆಯಾಗಿ ಕಾಂಬರೊ ಗೋಪಾಲನೇ

ಮಗುಗಳ ಮಾಣಿಕ್ಯ ತಗುಲಿತು ಕರೆಕೆಂದು

ಬೇಗದಲಿ ಬಂದು ಬಿಗಿದಪ್ಪಿ ಕೊಂಬರೋ || ೨ ||

ದುಷ್ಟನಾರಿಯರು ತಮ್ಮಿಷ್ಟವ ಸಲ್ಲಿಸೆಂದು

ಅಟ್ಟಿ ಬೆನ್ನಹಿಂದೆ ತಿರುಗುವರೋ

ಸೃಷ್ಟೀಶ ಪುರಂದರ ವಿಠಲ ರಾಯನೆ

ಇಷ್ಟಿಷ್ಟು ಬೆಣ್ಣೆಯ ಕೊಡುವೆನು ಗೋಪಾಲ || ೩ ||