ಈತನೀಗ ವಾಸುದೇವನು

ಕನಕದಾಸರು

ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ವಾಸುದೇವನು || ಪ ||

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ

ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ || ಅ.ಪ. ||

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ

ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ

ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ

ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ || 1 ||

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ

ಶರಗಳನ್ನು ತೀಡುತಿಪ್ಪನ ಯೋಚಿಸಿ

ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ

ಶಿರವನ್ನು ಛೇದಿಸಿದ ದೇವ ಕಾಣಿರೋ || ೨ ||

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ

ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ

ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ

ತ್ಕೃಷ್ಟ ಮಹಿಮನಾದ ದೇವ ಕಾಣಿರೋ || ೩ ||

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ

ವೀರನರನತ್ತ ಬಪ್ಪುದನ್ನು ಈಕ್ಷಿಸಿ

ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ

ಭಾರಕರ್ತನಾದ ದೇವನೀತ ಕಾಣಿರೋ || ೪ ||

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ

ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ

ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದಾ ಸಾರ್ವ

ಭೌಮ ಬಾಡದಾದಿಕೇಶವನ್ನ ನೋಡಿರೋ || ೫ ||