ದಾಸನ ಮಾಡಿಕೊ ಎನ್ನ

ಪುರಂದರ ದಾಸರು

ದಾಸನ ಮಾಡಿಕೊ ಎನ್ನ ಇಷ್ಟು

ಘಾಸಿ ಮಾಡುವರೇನೊ ಕರುಣಾಸಂಪನ್ನ || ಪ ||

ದುರುಳ ಬುದ್ಧಿಗಳೆಲ್ಲ ಬಿಡಿಸೊ ನಿನ್ನ

ಕರುಣ-ಕವಚವೆನ್ನ ಹರಣಕ್ಕೆ ತೊಡಿಸೊ

ಚರಣಸೇವೆ ಎನಗೆ ಕೊಡಿಸೊ ಅಭಯ

ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ || 1 ||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ

ಅಡಿಗೆರಗುವೆನಯ್ಯ ಅನುದಿನ ಪಾಡಿ

ಕಡೆಗಣ್ಣಲೇಕೆನ್ನ ನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ ||

ಮೊರೆಹೊಕ್ಕವರ ಕಾಯುವ ಬಿರುದು ಎನ್ನ

ಮರೆಯದೆ ರಕ್ಷಣೆ ಮಾಡಯ್ಯ ಪೊರೆದು

ದುರಿತ ರಾಶಿಗಳೆಲ್ಲ ತರಿದು ಸಿರಿ

ಪುರಂದರ ವಿಠಲ ಕರುಣದಿ ಕರೆದು || ೩ ||